ಮಡಿಕೇರಿ, ಅ. 30: ಶ್ರೀ ಅಯ್ಯಪ್ಪ ಕ್ಷೇತ್ರ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ನವೆಂಬರ್ 2 ರ ಶಬರಿಮನೆ ಕ್ಷೇತ್ರ ರಕ್ಷಿಸಿ ಆಂದೋಲನಕ್ಕೆ ಮಡಿಕೇರಿ ನಗರ ಬಿ.ಜೆ.ಪಿ. ಸಂಪೂರ್ಣ ಬೆಂಬಲ ನೀಡುತ್ತಿರುವದಾಗಿ ಮಡಿಕೇರಿ ನಗರ ಬಿ.ಜೆ.ಪಿ. ಅಧ್ಯಕ್ಷ ಮಹೇಶ್ ಜೈನಿ ತಿಳಿಸಿದ್ದಾರೆ.

ತಲೆತಲಾಂತರಗಳಿಂದ ಭಯ, ಭಕ್ತಿ ಮತ್ತು ಶ್ರದ್ಧೆಯಿಂದ ಅನುಸರಿಸಿಕೊಂಡು ಬರುತ್ತಿರುವ ಈ ಧಾರ್ಮಿಕ ಮತ್ತು ಸಂಪ್ರದಾಯ ಬದ್ಧವಾದ ಕಟ್ಟುಪಾಡುಗಳನ್ನು ಈ ಹಿಂದಿನಂತೆಯೇ ಮುಂದುವರಿಸಿಕೊಂಡು ಹೋಗುವಂತೆ ಮತ್ತು ಅಸಂಖ್ಯಾತ ಅಯ್ಯಪ್ಪ ಸ್ವಾಮಿ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗದಂತೆ ಕೇರಳ ಸರಕಾರ ನಡೆದುಕೊಳ್ಳಬೇಕೆಂದು ಮಹೇಶ್ ಜೈನಿ ಒತ್ತಾಯಿಸಿದ್ದಾರೆ.

ಅನೇಕ ದಿನಗಳ ಕಾಲ ವ್ರತ ನಿರತ ಅಯ್ಯಪ್ಪ ಭಕ್ತರು ದೇವರ ದರ್ಶನಕ್ಕೆ ಶಬರಿಮಲೆ ಕ್ಷೇತ್ರಕ್ಕೆ ತೆರಳುವಾಗ ಕೇರಳ ಸರಕಾರ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿ ಅವರ ವಾಹನಗಳಿಗೆ ಹಾನಿಯುಂಟು ಮಾಡಿರುವದು ಪಿಣರಾಯಿ ವಿಜಯನ್ ಸರಕಾರ. ಈ ಧರ್ಮ ವಿರೋಧಿ ನೀತಿಯನ್ನು ನಗರ ಬಿ.ಜೆ.ಪಿ. ಖಂಡಿಸುವದಾಗಿ ತಿಳಿಸಿದ್ದಾರೆ.

ಮಹಿಳೆಯರ ಕ್ಷೇತ್ರ ಪ್ರವೇಶಕ್ಕೆ ತಡೆ ಇಂದು ನಿನ್ನೆಯದಲ್ಲ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಕ್ಷೇತ್ರದ ಕಟ್ಟುಪಾಡುಗಳನ್ನು ಈ ರೀತಿಯಾಗಿ ಮಾರ್ಪಾಡು ಪಾಡುವದನ್ನು ಸಮಸ್ತ ಭಕ್ತ ವೃಂದ ಖಂಡಿಸುತ್ತದೆ. ಮಾತ್ರವಲ್ಲದೆ ನ್ಯಾಯಾಲಯದ ಈ ಆದೇಶವನ್ನು ಮರು ಪರಿಶೀಲಿಸಿ ಅಸಂಖ್ಯಾತ ಅಯ್ಯಪ್ಪ ಭಕ್ತರ ಭಾವನೆಗಳಿಗೆ ಬೆಲೆ ಕೊಡುವದಲ್ಲದೆ ಕ್ಷೇತ್ರದ ಪಾವಿತ್ರತೆಯನ್ನು ಉಳಿಸಿಕೊಡಬೇಕಾಗಿ ಸರಕಾರವನ್ನು ಒತ್ತಾಯಿಸಿದ್ದಾರೆ.