ಮಡಿಕೇರಿ, ಅ. 30: ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಾದ ವೀರಾಜಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆ ಪ.ಪಂ.ಗಳಿಗೆ ತಾ. 28 ರಂದು ನಡೆದಿರುವ ಚುನಾವಣೆಯ ಫಲಿತಾಂಶ ತಾ. 31 ರಂದು (ಇಂದು) ಪ್ರಕಟಗೊಳ್ಳಲಿದೆ.ಲೋಕಸಭಾ ಚುನಾವಣೆ ಎದುರಾಗುತ್ತಿರುವ ಸಮಯದಲ್ಲಿ ನಡೆದಿರುವ ಈ ಪಕ್ಷ ಆಧಾರಿತ ಚುನಾವಣೆ ಸಹಜವಾಗಿಯೇ ಕುತೂಹಲ ಸೃಷ್ಟಿಸಿದೆ. ರಾಜಕೀಯ ಪಕ್ಷಗಳು ಸೇರಿದಂತೆ ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳ ಕುತೂಹಲ ಹಾಗೂ ಸಾರ್ವಜನಿಕರ ಪ್ರಶ್ನೆಗೆ ತಾ. 31 ರಂದು ಉತ್ತರ ಸಿಗಲಿದ್ದು, ಇದೀಗ ರಾಜಕೀಯಾಸಕ್ತರ ನೋಟ ಮತ ಎಣಿಕೆಯ ಮೇಲೆ ನೆಟ್ಟಿದೆ.ವೀರಾಜಪೇಟೆಯ 18, ಕುಶಾಲನಗರದ 16 ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ ಚುನಾವಣೆ ನಡೆದಿದ್ದು, ಮತ ಎಣಿಕೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಚುನಾವಣಾ ಅಧಿಕಾರಿಗಳು ಅಗತ್ಯ ಕ್ರಮ ವಹಿಸಿದ್ದಾರೆ.ಒಟ್ಟು 145 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಮೂರು ಪಟ್ಟಣ ಪಂಚಾಯಿತಿಗಳಲ್ಲೂ ಬಿಜೆಪಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ, ವೀರಾಜಪೇಟೆ, ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆಯಿಂದ ಸ್ಪರ್ಧೆ ಮಾಡಿವೆ. ಆದರೆ ಕುಶಾಲನಗರದಲ್ಲಿ ಈ ಎರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿರುವದು ಮತ್ತೊಂದು ಅಂಶ. ಇವರ ನಡುವೆ ಹಲವು ಪಕ್ಷೇತರರೂ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ 18 ಸ್ಥಾನಕ್ಕೆ 55, ಸೋಮವಾರಪೇಟೆ 11 ಸ್ಥಾನಕ್ಕೆ 26 ಮಂದಿ ಹಾಗೂ ಕುಶಾಲನಗರದ 16 ಸ್ಥಾನಕ್ಕೆ 64 ಮಂದಿ ಕಣದಲ್ಲಿದ್ದಾರೆ. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಫಲಿತಾಂಶ ಹೊರ ಬೀಳುವ ನಿರೀಕ್ಷೆಯಿದೆ.

ಸೋಮವಾರಪೇಟೆ : ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಸ್‍ಡಿಪಿಐ ಜತೆಗೆ ಸ್ವತಂತ್ರ ಅಭ್ಯರ್ಥಿಗಳೂ ಚುನಾವಣಾ ಕಣದಲ್ಲಿ ಶತಾಯಗತಾಯ ಹೋರಾಟ ನಡೆಸಿದ್ದಾರೆ. ಕೆಲ ವಾರ್ಡ್‍ಗಳಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಫಲಿತಾಂಶವನ್ನು ನಿರ್ಧರಿಸಲಿದೆ. ಇಲ್ಲಿನ 16 ವಾರ್ಡ್‍ಗಳಿಗೆ ಸಂಬಂಧಿಸಿದಂತೆ 2 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ.

ಸೋಮವಾರಪೇಟೆ ಪ. ಪಂ. ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದು, 22 ವರ್ಷಗಳ ಬಿಜೆಪಿ ಆಡಳಿತವನ್ನು ಬದಲಾಯಿಸುವ ತವಕದಲ್ಲಿದೆ. 3 ಕಡೆಗಳಲ್ಲಿ ಬಂಡಾಯದ ಬಿಸಿ ಇದ್ದರೂ ಸಹ ಏಕಾಂಗಿಯಾಗಿ 11 ವಾರ್ಡ್‍ಗಳಲ್ಲಿ ಸ್ಪರ್ಧಿಸುವ ಮೂಲಕ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಕಮಲ ಪಾಳಯ ಶತಾಯಗತಾಯ ಪ್ರಯತ್ನಿಸಿದೆ.

ಎಲ್ಲಾ ವಾರ್ಡ್‍ಗಳಲ್ಲಿ ಹಣ, ವಸ್ತ್ರ, ಉಡುಗೊರೆಗಳು ಮತದಾರರ ಮನೆಗೆ ತಲಪಿದ್ದು, ಕೆಲವರು ಹಣವನ್ನು ಅಭ್ಯರ್ಥಿಗಳಿಗೇ ವಾಪಸ್ ನೀಡುವ ಮೂಲಕ ‘ನಮ್ಮ ಮತ ಮಾರಾಟಕ್ಕಿಲ್ಲ’ ಎಂಬ ಸಂದೇಶ ರವಾನಿಸಿದ್ದಾರೆ. ಚುನಾವಣೆ ನಡೆದ ದಿನಾಂಕದಿಂದ ತಮ್ಮದೇ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು ತೊಡಗಿದ್ದು, ಎಷ್ಟು ಲೀಡ್ ಬರಬಹುದು ಎಂಬ ಬಗ್ಗೆಯೇ ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್ 6, ಜೆಡಿಎಸ್ 5 ವಾರ್ಡ್‍ಗಳಲ್ಲಿ ಚುನಾವಣೆ ಎದುರಿಸಿವೆ. ಈ ಪೈಕಿ 4 ವಾರ್ಡ್‍ಗಳಲ್ಲಿ ಪಕ್ಷೇತರರು ಕಣದಲ್ಲಿದ್ದಾರೆ.(ಮೊದಲ ಪುಟದಿಂದ) ಸೋಮವಾರಪೇಟೆ ಪ.ಪಂ.ಗೆ ಸಂಬಂಧಿಸಿದಂತೆ ಒಂದು ಟೇಬಲ್‍ನಲ್ಲಿ ಮತ ಎಣಿಕೆ ನಡೆಯಲಿದೆ. 8 ಗಂಟೆಗೆ ಎಣಿಕೆ ಕಾರ್ಯ ಪ್ರಾರಂಭವಾಗಲಿದ್ದು, ಎರಡೂ ಪ.ಪಂ.ಗಳಿಗೆ ಏಕಕಾಲದಲ್ಲಿ ಪ್ರತ್ಯೇಕವಾಗಿ ಮತ ಎಣಿಕೆ ನಡೆಯುವದರಿಂದ, ಯಾವದೇ ಗೊಂದಲಗಳು ಎದುರಾಗದಿದ್ದರೆ 10 ಗಂಟೆಯೊಳಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.

ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿ ಅಥವಾ ಏಜೆಂಟ್‍ಗೆ ಮಾತ್ರ ಪ್ರವೇಶವಿದ್ದು, ಎರಡೂ ಕೊಠಡಿಗಳಲ್ಲೂ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಬೆಳಿಗ್ಗೆ 7.45ಕ್ಕೆ ಅಭ್ಯರ್ಥಿಗಳು ಮತ್ತು ಏಜೆಂಟ್ ಸಮಕ್ಷಮ ಭದ್ರತಾ ಕೊಠಡಿಯನ್ನು ತೆರೆದು ಮತಯಂತ್ರಗಳನ್ನು ಎಣಿಕೆ ಕೇಂದ್ರಕ್ಕೆ ಸಾಗಿಸಲಾಗುವದು. ಸರಿಯಾಗಿ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ ಎಂದು ಚುನಾವಣಾಧಿಕಾರಿಯಾಗಿರುವ ತಾಲೂಕು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.

ಪಂಚಾಯಿತಿ ಮಾಜೀ ಅಧ್ಯಕ್ಷರುಗಳಾದ ನಳಿನಿ ಗಣೇಶ್, ಎನ್.ಎಸ್. ಮೂರ್ತಿ, ವಿಜಯಲಕ್ಷ್ಮೀ ಸುರೇಶ್, ಮಾಜೀ ಉಪಾಧ್ಯಕ್ಷೆ ಶೀಲಾ ಡಿಸೋಜ, ಮಾಜೀ ಸದಸ್ಯರುಗಳಾದ ಆದಂ, ಸಂಜೀವ, ದಾಕ್ಷಾಯಿಣಿ, ವೆಂಕಟೇಶ್, ಬಿ.ಎಂ. ಸುರೇಶ್, ಜಯಂತಿ ಶಿವಕುಮಾರ್, ಮಾಜೀ ನಾಮನಿರ್ದೇಶನ ಸದಸ್ಯ ಉದಯಶಂಕರ್ ಅವರುಗಳು ಸ್ಪರ್ಧೆಯಲ್ಲಿರುವ ಪ್ರಮುಖರಾಗಿದ್ದು, ಅನಿತಾ ಮತ್ತು ಪುಷ್ಪ ಅವರುಗಳು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದವರಾಗಿದ್ದಾರೆ. ಉಳಿದಂತೆ 13 ಮಂದಿ ಹೊಸಬರು ಇದೇ ಪ್ರಥಮ ಬಾರಿಗೆ ಚುನಾವಣೆ ಎದುರಿಸಿದ್ದಾರೆ.

ಕುಶಾಲನಗರ ಪ.ಪಂ.ಗೆ ಸಂಬಂಧಿಸಿದಂತೆ ಮಾಜೀ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ, ಎಂ.ಎಂ.ಚರಣ್, ರೇಣುಕಾ, ಮಾಜೀ ಉಪಾಧ್ಯಕ್ಷ ಶರವಣಕುಮಾರ್, ಮಾಜೀ ಸದಸ್ಯರುಗಳಾದ ಪ್ರಮೋದ್ ಮುತ್ತಪ್ಪ, ಮಧುಸೂಧನ್, ಹೆಚ್.ಡಿ. ಚಂದ್ರು, ಸುರಯ್ಯಾ ಬಾನು, ಮೆಹರುನ್ನೀಸಾ ಅವರುಗಳು ಕಣದಲ್ಲಿರುವ ಪ್ರಮುಖರಾಗಿ ದ್ದಾರೆ. ಉಳಿದಂತೆ 55 ಮಂದಿ ಹೊಸಬರು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಒಟ್ಟು 64 ಮಂದಿಯ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಸೋಮವಾರಪೇಟೆಯ 11 ವಾರ್ಡ್‍ಗಳಲ್ಲಿ ಸ್ಪರ್ಧೆಯಲ್ಲಿರುವ ಬಿಜೆಪಿ 8 ವಾರ್ಡ್‍ಗಳಲ್ಲಿ ಜಯಗಳಿಸಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದರೆ, 5 ವಾರ್ಡ್‍ಗಳಲ್ಲಿರುವ ಜೆಡಿಎಸ್ 4ರಲ್ಲಿ ಗೆಲವು ಸಾಧಿಸಲಿದೆ ಎಂದು ಜೆಡಿಎಸ್ ನಗರಾಧ್ಯಕ್ಷ ಜಯಾನಂದ್ ಅಭಿಪ್ರಾಯಿಸಿದ್ದಾರೆ. 6 ವಾರ್ಡ್‍ಗಳಲ್ಲಿ ಸ್ಫರ್ಧೆಯಲ್ಲಿರುವ ಕಾಂಗ್ರೆಸ್ ಪಕ್ಷ 4ರಲ್ಲಿ ಜಯ ಸಾಧಿಸುವದು ನಿಶ್ಚಿತ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಭರವಸೆ ವ್ಯಕ್ತಪಡಿಸಿದ್ದಾರೆ.

ವೀರಾಜಪೇಟೆ : ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 55 ಮಂದಿ ಸ್ಪರ್ಧಿಸಿದ್ದು ಇವರುಗಳ ಸೋಲು ಗೆಲವಿನ ಭವಿಷ್ಯ ತಾ. 31 ರಂದು (ಇಂದು) ನಿರ್ಧಾರವಾಗಲಿದೆ.

ಚುನಾವಣೆಯ ಮತ ಎಣಿಕೆ ಇಂದು ಇಲ್ಲಿನ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದ್ದು ಮತ ಎಣಿಕೆ ಕಾರ್ಯದ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಗೆ ಆರಂಭವಾಗಲಿದೆ. ಮತಯಂತ್ರಗಳನ್ನು ಎರಡು ಟೇಬಲ್‍ಗಳಲ್ಲಿ ಜೋಡಿಸಿದ ನಂತರ 7-45 ರಿಂದ ಮತ ಎಣಿಕೆ ಆರಂಭವಾಗಲಿದ್ದು, ಸುಮಾರು 10 ಗಂಟೆ ವೇಳೆಗೆ ಮತಗಳ ಎಣಿಕೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಮತ ಎಣಿಕೆಯಲ್ಲಿ ಸುಮಾರು 60 ಮಂದಿ ರೆವಿನ್ಯೂ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು, ಮಹಿಳಾ ಪೊಲೀಸರು ಸೇರಿದಂತೆ 100 ಮಂದಿ ಪೊಲೀಸರು ಬಂದೋಬಸ್ತ್‍ನಲ್ಲಿರುತ್ತಾರೆ ಎಂದು ತಾಲೂಕು ಸಹಾಯಕ ಚುನಾವಣಾಧಿಕಾರಿ ಆರ್.ಗೋವಿಂದರಾಜು ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿ ಚುನಾವಣಾ ಮತ ಎಣಿಕೆಯ ಪ್ರಯುಕ್ತ ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಗೊಳಿಸಲಾಗಿದೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಪಕ್ಷೇತರರು ಸೇರಿದಂತೆ ಎಲ್ಲಾ ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯ ಇಂದು ಗೊತ್ತಾಗಲಿದ್ದು ಮುಂಬರುವ ಲೋಕಸಭೆ ಚುನಾವಣೆಗೆ ಈ ಫಲಿತಾಂಶ ಮೂರು ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಲಿದೆ.

ರಾಜ್ಯದಲ್ಲಿ ಮೈತ್ರಿ ಸರಕಾರ ಆಡಳಿತವಿದ್ದರೂ, ಕಾಂಗ್ರೆಸ್-ಜೆಡಿಎಸ್ ಸೌಹಾರ್ದ ಹೋರಾಟ ನಡೆಸಿದ್ದು, ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಘೋಷಣೆ ಮಾಡಿವೆ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಉತ್ಸಾಹದಲ್ಲಿದೆ. ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ.

ಕೇಂದ್ರದ ಸುತ್ತ ನಿಷೇಧಾಜ್ಞೆ : ಮತ ಎಣಿಕೆ ಕೇಂದ್ರದ 200 ಮೀ ವ್ಯಾಪ್ತಿಯಲ್ಲಿ ನಿಬಂಧನೆಗೊಳಪಡಿಸಿ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗುಂಪುಗಾರಿಕೆ ನಡೆಸುವುದು, ಆಯುಧ, ಶಸ್ತ್ರಾಸ್ತ್ರ ಮತ್ತು ಮಾರಕಾಸ್ತ್ರ ಹೊತ್ತು ತಿರುಗಬಾರದು. ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಭ್ಯರ್ಥಿಗಳು, ಎಣಿಕೆ ಏಜೆಂಟರು, ಅನುಮತಿ ಪಡೆದ ರಕ್ಷಣಾ ಇಲಾಖೆ ಹಾಗೂ ಮಾಧ್ಯಮದವರು ಹೊರತುಪಡಿಸಿ ಉಳಿದ ಎಲ್ಲ ತರಹದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಘೋಷಣೆ ಕೂಗುವದು, ಪಟಾಕಿ ಸಿಡಿಸುವದು, ಮೆರವಣಿಗೆ ನಡೆಸುವದು ಹಾಗೂ ಶಾಂತಿ ಶಿಸ್ತು ಪಾಲನೆಗೆ ಭಂಗ ತರುವ ಯಾವುದೇ ರೀತಿಯಲ್ಲಿ ವರ್ತಿಸುವುದನ್ನು ನಿಷೇಧಿಸಲಾಗಿದೆ. ಸದಾಚಾರ ಸಂಹಿತೆ ಜಾರಿಯಲ್ಲಿರುವದರಿಂದ ಯಾವುದೇ ರೀತಿಯ ಸಾರ್ವಜನಿಕ ಆಸ್ತಿಗಳಿಗೆ ವಿರೂಪವನ್ನು ಉಂಟು ಮಾಡುವದನ್ನಾಗಲೀ ಅಥವಾ ನಷ್ಟಗೊಳಿಸುವದನ್ನಾಗಲೀ ಮಾಡತಕ್ಕದ್ದಲ್ಲ.

ನಿಷೇಧಾಜ್ಞೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗೆ ಅನ್ವಯವಾಗದಿದ್ದರೂ ಸಹ, ಮತ ಎಣಿಕೆ ಕಾರ್ಯಕ್ಕೆ ಯಾವದೇ ರೀತಿ ಅಡಚಣೆಯಾಗದಂತೆ ಆಚರಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸಿಬ್ಬಂದಿ ನಿಯೋಜನೆ : ಮತ ಎಣಿಕೆ ಹಿನ್ನೆಲೆ ಪೆÇಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಎಣಿಕಾ ಕೇಂದ್ರಗಳಿಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಭದ್ರತಾ ಕೊಠಡಿಯಿಂದ ಮತ ಎಣಿಕೆ ಕೊಠಡಿಗೆ ಮತ ಪೆಟ್ಟಿಗೆ ಸಾಗಿಸಲು ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ

ಪಕ್ಷ ನಿಷ್ಠೆ ಸತ್ಯಾಸತ್ಯತೆ : ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ತಮ್ಮ ಅಭ್ಯರ್ಥಿ ಗೆಲ್ಲುವದಾಗಿ ಹೇಳಿಕೊಂಡಿದ್ದಾರೆ. ಆದರೆ, ಎರಡೂ ಪಕ್ಷಗಳಲ್ಲಿ ಆಂತರಿಕ ಕಚ್ಚಾಟ ಭಿನ್ನಾಭಿಪ್ರಾಯ ಇದ್ದೇ ಇದೆ. ಯಾರು ಯಾವಾಗ ಒಳಹೊಡೆತ ನೀಡಿದ್ದಾರೆಂಬುದು ಈವರೆಗೂ ಗೊತ್ತಾಗುತ್ತಿಲ್ಲ. ಮೇಲ್ನೋಟಕ್ಕೆ ಎಲ್ಲಾ ಮತದಾರರು ಪ್ರಾಮಾಣಿಕ ಮತದಾನ ಮಾಡಿರುವ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಎಣಿಕೆ ನಂತರ ಯಾರು ಯಾರಿಗೆ ಒಳ ಹೊಡೆತ ನೀಡಿದ್ದಾರೆಂಬುದು ಬಯಲಾಗಲಿದೆ. ಕಾಂಗ್ರೆಸ್ ಅಭ್ಯರ್ಥಿ ವಿಜೇತವಾಗಿದ್ದೇ ಆದರೆ, ಬಿಜೆಪಿ ಮುಖಂಡರು ಆಂತರಿಕವಾಗಿ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಾರೆಂಬ ನಿರ್ಧಾರಕ್ಕೆ ಬರಲಾಗುತ್ತಿದೆ. ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಬ್ಬರೂ ಗೆಲುವು ತಮ್ಮದೇ ಎಂದು ಬೀಗುತ್ತಿದ್ದಾರೆ. ಆದರೂ ಕೊನೆ ಘಳಿಗೆಯಲ್ಲಿ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತಾಗುತ್ತದೆಯೋ ಎಂದು ಕಾದು ನೋಡಬೇಕಾಗಿದೆ.

- ವರದಿ : ಶಶಿ, ವಿಜಯ್, ಡಿ.ಎಂ.ಆರ್., ರಂಜಿತಾ.