ಮಡಿಕೇರಿ, ಅ. 30: ಭಾನುವಾರದ ರಜೆಯ ಗುಂಗಿನಿಂದ ಹೊರಬಂದ ಸಾರ್ವಜನಿಕರಿಗೆ ಸೋಮವಾರ ಬೆಳಿಗ್ಗೆಯಿಂದಲೇ ಆತಂಕವೊಂದು ಎದುರಾಗಿತ್ತು. ಸಾಮಾಜಿಕ ಜಾಲತಾಣಗಳ ಪೈಕಿ ಒಂದಾದ ವಾಟ್ಸಾಪ್‍ನಲ್ಲಿ ಹುಲಿಯೊಂದು ರಸ್ತೆ ದಾಟುವ ದೃಶ್ಯ, ಇದರೊಂದಿಗೆ ವ್ಯಕ್ತಿಯೋರ್ವರ ಶರೀರದ ಮೇಲ್ಭಾಗವನ್ನು ಹುಲಿ ತಿಂದು ಹಾಕಿರುವಂತಹ ಭೀಭತ್ಸತೆ ಇದನ್ನು ಕಾಡಿನಂಚಿನಲ್ಲಿ ವ್ಯಕ್ತಿಯೋರ್ವರು ವೀಕ್ಷಿಸುತ್ತಿದ್ದುದು ಅನತಿದೂರದಲ್ಲಿ ಮಾಂಸದ ಚೂರು... ಹೀಗೆ ಜನತೆಯಲ್ಲಿ ಇದೆಂತಹ ಘಟನೆ ಸಂಭವಿಸಿದೆ ಎಂಬಂತಹ ನಡುಕ ಹುಟ್ಟಿಸುವಂತಹ ಚಿತ್ರಗಳು ಹರಿದಾಡುತ್ತಿತ್ತು.ಈ ಚಿತ್ರಗಳು ಬೆಳಿಗ್ಗೆಯಿಂದಲೇ ಅತ್ತಿತ್ತ ಚಲಾವಣೆಗೊಳ್ಳುತ್ತಿದ್ದಂತೆ ಈ ಘಟನೆ ಸಂಭವಿಸಿದ್ದು ಎಲ್ಲಿ ಎಂಬದು ಪ್ರಶ್ನೆ ಹುಟ್ಟು ಹಾಕಿತ್ತು. ಇದು ಸಂಭವಿಸಿರುವದು ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿಯಲ್ಲಿ ಎಂಬ ಸಂದೇಶವೂ ರವಾನೆಗೊಂಡಿದ್ದವು... ಮೊದಲೇ ಜಿಲ್ಲೆಯ ಅಲ್ಲಲ್ಲಿ ವ್ಯಾಘ್ರನ ಉಪಟಳ, ಜಾನುವಾರುಗಳನ್ನು ಕಬಳಿಸುತ್ತಿರುವ ಪ್ರಕರಣಗಳು ನಡೆಯುತ್ತಿದ್ದರಿಂದ ಇದು ಕೂಡ ನಿಜವಾಗಿರಬಹುದು ಎಂದೇ ಜನತೆ ನಂಬುವಂತಾಗಿತ್ತಲ್ಲದೆ... ಪರಸ್ಪರ ಇಡೀ ದಿನ ಈ ಮಾತುಕತೆಗಳಲ್ಲೇ ವಾಟ್ಸಾಪ್ ಮೂಲಕ ನಡೆಯುತ್ತಿತ್ತು.

ಈ ಕಾರಣದಿಂದಾಗಿ ಅರಣ್ಯ ಇಲಾಖೆಗೂ ನೂರಾರು ದೂರವಾಣಿಗಳು ಹೋಗಿವೆ. ಇದರಂತೆ ಇಲಾಖೆ ಕೂಡ ಪರಿಶೀಲನೆ ನಡೆಸಿದ್ದು, ಈ ರೀತಿಯ ಘಟನೆ ನಡೆದಿರುವ ಬಗ್ಗೆ ಅರಣ್ಯ ಇಲಾಖೆಯಲ್ಲಾಗಲಿ, ಪೊಲೀಸ್ ಇಲಾಖೆಯಲ್ಲಿಯಾಗಲಿ ದೂರು ದಾಖಲಾಗಿಲ್ಲ ಎಂಬದನ್ನು ಹೊರ ಪ್ರಪಂಚಕ್ಕೆ ತಿಳಿಸಲು ಮತ್ತೆ ಸಾಮಾಜಿಕ ಜಾಲತಾಣವನ್ನೇ ಅವಲಂಬಿಸಬೇಕಾಯಿತು. ಮಾತ್ರವಲ್ಲದೆ ವಾರ್ತಾ ಮತ್ತು ಪ್ರಚಾರ ಇಲಾಖೆಯನ್ನೂ ಅವಲಂಬಿಸುವಂತಾಗಿತ್ತು.

ಕಿಜಿಲ್ಲೆಯ ಯಾವದೇ ಜಾಗದಲ್ಲಿ ಇಂತಹ ಘಟನೆ ನಡೆದಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಲ್ಲಲ್ಲಿ ಗಸ್ತು ನಡೆಸುತ್ತಿದ್ದಾರೆ ಎಂಬ ಸಂದೇಶವನ್ನು ಅರಣ್ಯ ಇಲಾಖೆ ನೀಡಿದರೂ ಇದರ ಅರಿವಿಲ್ಲದವರಿಂದ ಮತ್ತೆ ಮತ್ತೆ ಈ ಚಿತ್ರಗಳು ಹರಿದಾಡುವ ಮೂಲಕ ಒಂದು ರೀತಿಯ ದಿಗ್ಭ್ರಮೆ ಸೃಷ್ಟಿಯಾಗಿತ್ತು. ವಿಕೃತ ಮನಸ್ಸಿನ ಇಂತಹ ಕಿಡಿಗೇಡಿಗಳಿಗೆ ಏನೆನ್ನಬೇಕು...?