ಮಡಿಕೇರಿ, ಅ. 30: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವಾ ಭದ್ರತೆಗಾಗಿ ಹುದ್ದೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿ ಸುಪ್ರೀಂಕೋರ್ಟ್ ಮೊರೆ ಹೋಗಲು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ.

ಶಿವಮೊಗ್ಗದ ಬಸವ ಕಲ್ಯಾಣ ಮಂದಿರದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದು ಹುದ್ದೆ ಖಾಯಂಗೊಳಿಸಲು ಕೋರಿ ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಲು ಸಂಘಟನೆ ನಿರ್ಧಾರ ಕೈಗೊಂಡಿತು. ಕಳೆದ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಗೌರವ ವೇತನ ನೀಡುತ್ತಿದ್ದು, ಸೇವಾ ಭದ್ರತೆಯೇ ಇಲ್ಲದಾಗಿದೆ. ಹುದ್ದೆಯನ್ನು ಸರ್ಕಾರ ಖಾಯಂಗೊಳಿಸದೆ ಗೌರವ ವೇತನದಲ್ಲಿ ಮುಂದುವರಿ ಸುತ್ತಿರುವದರಿಂದ ನಿವೃತ್ತರಾದ ಮೇಲೆ ಪಿಂಚಣಿ ಇಲ್ಲದೆ ಬರಿಗೈಯಲ್ಲಿ ಬದುಕು ಸಾಗಿಸಬೇಕಾಗಿದೆ ಎನ್ನುವ ಆರೋಪ ಸಭೆಯಲ್ಲಿ ಕೇಳಿ ಬಂತು. ಹಲವು ಬಾರಿ ಮನವಿ ಸಲ್ಲಿಸಿದರೂ, ಹೋರಾಟ, ಪ್ರತಿಭಟನೆ ಗಳನ್ನು ನಡೆಸಿದರೂ ಸರ್ಕಾರ ಎಚ್ಚೆತ್ತು ಕೊಳ್ಳುತ್ತಿಲ್ಲ. ಇನ್ನು ಮುಂದೆಯೂ ಇದೇ ಪರಿಸ್ಥಿತಿ ಮುಂದುವರಿಯುವ ಆತಂಕವಿದ್ದು, ನ್ಯಾಯಾಲಯದ ಮೊರೆ ಹೋಗುವದು ಸೂಕ್ತವೆಂದು ಸಭೆ ನಿರ್ಣಯ ಕೈಗೊಂಡಿತು.

ಸಭೆಯನ್ನು ಬಸವ ಕೇಂದ್ರದ ಶ್ರೀ ಬಸವ ಮರುಳ ಸಿದ್ಧಸ್ವಾಮಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಹಾಗೂ ಸಲಹೆಗಾರ ಕೆ.ಸಿ. ಬಸವರಾಜು ಪ್ರಾಸ್ತವಿಕವಾಗಿ ಮಾತನಾಡಿದರು.

ಸಂಘಟನೆಯು ಉಪಾಧ್ಯಕ್ಷ ಟಿ.ಪಿ. ರಮೇಶ್, ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಜಿಲ್ಲಾ ಸಂಘದ ಅಧ್ಯಕ್ಷೆ ಭವಾನಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸೊರಬ ತಾಲೂಕಿನ ಅಧ್ಯಕ್ಷೆ ಮಂಜುಳ ಸರ್ವರನ್ನು ಸ್ವಾಗತಿಸಿ, ಸಾಗರ ಘಟಕದ ರೇಣುಕಾ ವಂದಿಸಿದರು.

ಸಂಘಟನೆಯ ರಾಜ್ಯ ಸಲಹೆಗಾರ ಕೆ.ಸಿ. ಬಸವರಾಜ್, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಆರ್. ಬಸವರಾಜು, ಶಿವಮೊಗ್ಗ ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ದಾವಣಗೆರೆ, ಕೊಡಗು ಹಾಗೂ ಮಡಿಕೇರಿ ತಾಲೂಕು ಸಂಘಟನೆಗಳ ಪ್ರಮುಖರು, ಕೊಡಗು ಜಿಲ್ಲೆಯ ಪದಾಧಿಕಾರಿಗಳಾದ ಎ.ಜೆ. ತಾರಾಮಣಿ, ಬಿ.ಎಂ. ಪುಷ್ಪಾವತಿ, ಎಸ್.ಎ. ಗೀತಾ, ತಾಲೂಕು ಘಟಕದ ಪದಾಧಿಕಾರಿಗಳಾದ ವಿ.ಹೆಚ್. ನಾಗರತ್ನ, ಡಿ.ಆರ್. ಮಾಲತಿ, ಸಿ.ಯು. ಪವಿತ್ರ, ವೀಣಾ ಕುಮಾರಿ, ದೇವಮಾಜಿ, ಆಶಾಲತ, ಕುಸುಮ, ಶೋಭಾ, ಸುಶೀಲ ಹಾಗೂ ಸಾವಿತ್ರಿ ಉಪಸ್ಥಿತರಿದ್ದರು.