ಸೋಮವಾರಪೇಟೆ, ಅ. 29: ಕುಶಾಲನಗರ ಮತ್ತು ಸೋಮವಾರ ಪೇಟೆ ಪಟ್ಟಣ ಪಂಚಾಯಿತಿಗೆ ನಿನ್ನೆ ನಡೆದ ಮತದಾನದಲ್ಲಿ ಬಳಕೆ ಯಾಗಿದ್ದ ಎಲೆಕ್ಟ್ರಾನಿಕ್ ಮತಯಂತ್ರ ಗಳನ್ನು ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ತೆರೆಯಲಾಗಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ.ಸೋಮವಾರಪೇಟೆಯ 26 ಮತ್ತು ಕುಶಾಲನಗರದ 64 ಮಂದಿ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂ ನಲ್ಲಿ ಭದ್ರವಾಗಿದ್ದು, ತಾ. 31ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಸೋಮವಾರ ಪೇಟೆಯ 11 ಹಾಗೂ ಕುಶಾಲನಗರದ 16 ವಾರ್ಡ್‍ಗಳಿಗೆ ಚುನಾವಣೆ ನಡೆದಿದ್ದು, ಅಂದು ಪೂರ್ವಾಹ್ನ 10 ಗಂಟೆಯ ಒಳಗೆ ಎಲ್ಲಾ ವಾರ್ಡ್‍ಗಳ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ. ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಪ್ರತ್ಯೇಕವಾಗಿ ಮತ ಎಣಿಕೆ ನಡೆಯಲಿದೆ. ಕುಶಾಲನಗರದ 16 ವಾರ್ಡ್‍ಗಳಿಗೆ ಸಂಬಂಧಿಸಿದಂತೆ 64 ಮಂದಿ ಚುನಾವಣೆ ಎದುರಿಸಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಸ್‍ಡಿಪಿಐ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆ ಯಲ್ಲಿದ್ದಾರೆ. ಇಲ್ಲಿನ 16 ವಾರ್ಡ್ ಗಳಿಗೆ ಸಂಬಂಧಿಸಿದಂತೆ 2 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ.

ಸೋಮವಾರಪೇಟೆಗೆ ಸಂಬಂಧಿಸಿದಂತೆ 11 ವಾರ್ಡ್‍ಗಳಿಂದ ಒಟ್ಟು 26 ಮಂದಿ ಸ್ಪರ್ಧೆಯಲ್ಲಿದ್ದು, ಬಿಜೆಪಿ ಎಲ್ಲಾ ವಾರ್ಡ್‍ಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 6, ಜೆಡಿಎಸ್ 5 ವಾರ್ಡ್‍ಗಳಲ್ಲಿ ಚುನಾವಣೆ ಎದುರಿಸಿವೆ. ಈ ಪೈಕಿ 4 ವಾರ್ಡ್ ಗಳಲ್ಲಿ ಪಕ್ಷೇತರರು ಕಣದಲ್ಲಿದ್ದಾರೆ. ಈ ಪ.ಪಂ.ಗೆ ಸಂಬಂಧಿಸಿದಂತೆ ಒಂದು ಟೇಬಲ್‍ನಲ್ಲಿ ಮತ ಎಣಿಕೆ ನಡೆಯಲಿದೆ.

ಮತ ಎಣಿಕೆ ಕೇಂದ್ರದ ಒಳಗೆ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಪರವಾಗಿ ಏಜೆಂಟ್‍ಗೆ ಮಾತ್ರ (ಓರ್ವರಿಗೆ ಮಾತ್ರ) ಪ್ರವೇಶಾವ ಕಾಶವಿದೆ. ಒಂದು ಟೇಬಲ್‍ನಲ್ಲಿ ಸೂಪರ್‍ವೈಸರ್ ಮತ್ತು ಅಸಿಸ್ಟೆಂಟ್ ಸೂಪರ್‍ವೈಸರ್‍ಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿಯಾಗಿರುವ ತಾಲೂಕು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.

ಎರಡೂ ಪ.ಪಂ.ಗೆ ಸಂಬಂಧಿಸಿ ದಂತೆ ಒಟ್ಟು 90 ಮಂದಿ ಅಭ್ಯರ್ಥಿ ಗಳಿದ್ದು, ಇವರುಗಳ ಭವಿಷ್ಯ ಸದ್ಯಕ್ಕೆ ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ತೆರೆಯಲಾಗಿರುವ ಸ್ಟ್ರಾಂಗ್‍ರೂಂನಲ್ಲಿ ಭದ್ರವಾಗಿದೆ. ಎರಡು ಪಾಳಿಯಲ್ಲಿ ಈರ್ವರು ಎಎಸ್‍ಐ, ಮೂವರು ಪೇದೆಗಳು ಸೇರಿದಂತೆ ಐವರು ಭದ್ರತೆ ಒದಗಿಸುತ್ತಿದ್ದಾರೆ.