ಸೋಮವಾರಪೇಟೆ, ಅ. 30: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಳೆದ ಕೆಲ ದಶಕಗಳಿಂದ ಅಭಿವೃದ್ಧಿಯ ಮಗ್ಗುಲಿಗೆ ಹೊರಳುತ್ತಿದ್ದರೂ ಸಹ, ಇಂದಿಗೂ ಒಂದಷ್ಟು ಸಮಸ್ಯೆಗಳು ಪಟ್ಟಣವನ್ನು ಆವರಿಸಿಕೊಂಡಿವೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದರೂ ಸಹ ಇಂದಿಗೂ ಪರಿಹಾರ ಕಾಣದೇ ಹಲವಷ್ಟು ಸಮಸ್ಯೆಗಳು ಜೀವಂತವಿವೆ.

ಪ. ಪಂ. ವ್ಯಾಪ್ತಿಯಲ್ಲಿದ್ದ ಡಾಂಬರು ರಸ್ತೆಗಳನ್ನು ಕಾಂಕ್ರೀಟೀಕರಣ ಮಾಡಲಾಗಿದೆ. ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಖಾಸಗಿ ಬಸ್ ನಿಲ್ದಾಣದಲ್ಲಿ ಹಲವಷ್ಟು ಅಭಿವೃದ್ಧಿಯಾಗಿದೆ. ಇದರೊಂದಿಗೆ ಪಟ್ಟಣದ ಆನೆಕೆರೆ, ಮಹದೇಶ್ವರ ಬಡಾವಣೆಯಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಹಾರಂಗಿಯಿಂದ ಕುಡಿಯುವ ನೀರನ್ನು ಪಟ್ಟಣಕ್ಕೆ ತರಲಾಗಿದೆ. ಸದ್ಯದ ಮಟ್ಟಿಗೆ ಪಟ್ಟಣದಲ್ಲಿ ಕುಡಿಯುವ ನೀರು, ವಿದ್ಯುತ್‍ಗೆ ಅಷ್ಟೇನೂ ಸಮಸ್ಯೆ ಇಲ್ಲದಂತಾಗಿದೆ. ಕಳೆದ ಸಾಲಿನ ಆಡಳಿತ ಮಂಡಳಿಯಲ್ಲಿ ಸರಿಸುಮಾರು ರೂ. 2 ಕೋಟಿ ವೆಚ್ಚದಲ್ಲಿ ನೂತನ ಆಡಳಿತ ಸಮುಚ್ಚಯ ಭವನ ನಿರ್ಮಿಸಿ, ಎರಡು ತಿಂಗಳ ಹಿಂದಷ್ಟೇ ಉದ್ಘಾಟಿಸಲಾಗಿದೆ. ಮುಖ್ಯಮಂತ್ರಿಗಳ ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ ಸೋಮವಾರಪೇಟೆಯಲ್ಲಿ ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗಿದ್ದರೂ ಸಹ ಜನತೆಯ ನಿರೀಕ್ಷೆಯಂತೆ ಉಪಯೋಗಕ್ಕೆ ಬರುತ್ತಿಲ್ಲ. ಮಳೆಗಾಲದಲ್ಲಿ ಹೈಟೆಕ್ ಮಾರುಕಟ್ಟೆ ಸೋರುತ್ತಿದೆ. ಉದ್ಯಾನವನಗಳು ನಿರ್ವಹಣೆಯಿಲ್ಲದೇ ಸೊರಗುತ್ತಿದೆ.

ಪ.ಪಂ. ವ್ಯಾಪ್ತಿಯಲ್ಲಿ ನಿವೇಶನ ರಹಿತ ಬಡಮಂದಿಗೆ ಇಲ್ಲಿನ ಹೊಸ ಬಡಾವಣೆಯಲ್ಲಿ ನಿವೇಶನ ನೀಡಲಾಗಿದ್ದು, ಇದರಲ್ಲಿ ಅನರ್ಹ ಫಲಾನುಭವಿಗಳು ಸೇರ್ಪಡೆಗೊಂಡಿದ್ದಾರೆ ಎಂಬ ಆರೋಪಗಳು ಇವೆ. ಆದರೂ 134 ಮಂದಿಗೆ ನಿವೇಶನ ನೀಡುವ ಮೂಲಕ ಪಟ್ಟಣ ಪಂಚಾಯಿತಿ ನೆಲೆ ಒದಗಿಸಿದೆ.

ವಾಣಿಜ್ಯ ಸಂಕೀರ್ಣದಿಂದ ನಷ್ಟ: ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ರೂ. 90 ಲಕ್ಷ ವೆಚ್ಚದಲ್ಲಿ ಉದ್ಘಾಟನೆಗೊಂಡ ವಾಣಿಜ್ಯ ಸಂಕೀರ್ಣದಲ್ಲಿ ಹಲವಷ್ಟು ಮಳಿಗೆಗಳು ಖಾಲಿ ಉಳಿದಿವೆ. ನಾಲ್ಕೈದು ಬಾರಿ ಟೆಂಡರ್ ಕರೆಯಲಾಗಿದ್ದರೂ ವಿಲೇವಾರಿಯಾಗಿಲ್ಲ. ಇಲ್ಲಿರುವ 17 ಮಳಿಗೆಗಳÀ ಪೈಕಿ 8 ಮಳಿಗೆಗಳು ಖಾಲಿ ಉಳಿದಿದ್ದು, ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ.

ತ್ಯಾಜ್ಯವಿಲೇವಾರಿ ಸಮಸ್ಯೆ: ಪಟ್ಟಣ ಪಂಚಾಯಿತಿಯನ್ನು ತ್ಯಾಜ್ಯ ವಿಲೇವಾರಿ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಸಿದ್ದಲಿಂಗಪುರದಲ್ಲಿ ಜಾಗ ಖರೀದಿಸಿ ತ್ಯಾಜ್ಯವಿಲೇವಾರಿಗೆ ಮುಂದಾಗಿದ್ದ ಸಂದರ್ಭ ಭಾರೀ ಪ್ರತಿರೋಧ ವ್ಯಕ್ತವಾದ ಹಿನ್ನೆಲೆ ಪ್ರಯತ್ನವನ್ನು ಕೈಬಿಡಲಾಗಿದೆ. ಇದರೊಂದಿಗೆ ಕರ್ಕಳ್ಳಿ, ಹೊಸ ಬಡಾವಣೆ, ಕಲ್ಕಂದೂರು, ಮಂಕ್ಯ ಗ್ರಾಮದಲ್ಲಿ ನಡೆಸಿದ ಪ್ರಯತ್ನವೂ ಫಲ ನೀಡಿಲ್ಲ. ಪರಿಣಮ ಪಟ್ಟಣದ ಹೃದಯ ಭಾಗದಂತಿರುವ ಮಾರುಕಟ್ಟೆಯ ಒಂದು ಬದಿಯಲ್ಲೇ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ.

ಕೈಗೂಡದ ಸಮುದಾಯ ಭವನ: ಮಲೆನಾಡು ಅಭಿವೃದ್ಧಿ ಯೋಜನೆಯಡಿ ಇಲ್ಲಿನ ಜೇಸೀ ವೇದಿಕೆಯ ಮುಂಭಾಗದ ವಾಣಿಜ್ಯ ಸಂಕೀರ್ಣದ ಮೇಲೆ ನಿರ್ಮಿಸಲಾಗಿರುವ ಸಮುದಾಯ ಭವನ 6 ವರ್ಷಗಳಾದರೂ ಸಾರ್ವಜನಿಕರ ಉಪಯೋಗಕ್ಕೆ ಲಭಿಸಿಲ್ಲ. ಇದೀಗ ಸಮುದಾಯ ಭವನದ ಬದಲಿಗೆ ಮಳಿಗೆಗಳನ್ನು ನಿರ್ಮಿಸಲು ಪ.ಪಂ. ಮುಂದಾಗಿದೆ.

ಪಾರ್ಕಿಂಗ್ ಸಮಸ್ಯೆ: ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆ ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿನ ತಾಲೂಕು ಕಚೇರಿ ಆವರಣ, ತಾಲೂಕು ಪಂಚಾಯಿತಿ ಮುಂಭಾಗ, ಮಡಿಕೇರಿ ರಸ್ತೆ, ಕ್ಲಬ್‍ರಸ್ತೆ, ಮುಖ್ಯರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ತ್ಯಾಗರಾಜ ರಸ್ತೆ, ಎಂ.ಡಿ. ಬ್ಲಾಕ್ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದರೂ ಸುಲಲಿತ ನಿಲುಗಡೆ ಸಾಧ್ಯವಾಗುತ್ತಿಲ್ಲ. ಈಗಿರುವ ಮಾರುಕಟ್ಟೆಯನ್ನು ಉನ್ನತೀಕರಣಗೊಳಿಸಿ, ತಳಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಶಾಸಕರು ಸೂಚಿಸಿದ್ದು, ಅದರಂತೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. 2 ಕೋಟಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ.

ಹೊಂಡಾಗುಂಡಿ ರಸ್ತೆ: ಪಟ್ಟಣವನ್ನು ಹೊರತುಪಡಿಸಿದರೆ ಹಲವಷ್ಟು ಬಡಾವಣೆಗಳ ಒಳ ರಸ್ತೆಗಳು ಗುಂಡಿಮಯವಾಗಿದೆ. ವಲ್ಲಭಬಾಯಿ ಬಡಾವಣೆಯ ರಸ್ತೆಗಳು ತೀರಾ ಹಾಳಾಗಿದೆ. ಪಟ್ಟಣದ ಕೆಲವೆಡೆ ಡಾಂಬರು ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚಲೂ ಸಹ ಸಾಧ್ಯವಾಗಿಲ್ಲ.

ಈಡೇರದ ಪುರಸಭೆ: ಸೋಮವಾರಪೇಟೆ ಪ.ಪಂ.ನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಹಲವಷ್ಟು ಬಾರಿ ಪ್ರಸ್ತಾಪಗೊಂಡಿದ್ದರೂ ಸಹ ಇದು ಮಾತುಕತೆಗಷ್ಟೇ ಸೀಮಿತವಾಗಿದೆ. ಪಟ್ಟಣ ಸಮೀಪದ ಬೇಳೂರು, ಹಾನಗಲ್ಲು, ಚೌಡ್ಲು ಗ್ರಾಮ ಪಂಚಾಯಿತಿಗಳ ಕೆಲ ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಇಂದಿಗೂ ಪ್ರಯತ್ನ ನಡೆಯುತ್ತಿದೆ.

350ಕ್ಕೂ ಅಧಿಕ ಅರ್ಜಿ: ಪ.ಪಂ.ವ್ಯಾಪ್ತಿಯಲ್ಲಿ ಅನೇಕ ದಶಕಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮಂದಿಗೆ ಇಂದಿಗೂ ನಿವೇಶನ ಲಭಿಸಿಲ್ಲ. ನಿವೇಶನ ಕೋರಿ ಪ.ಪಂ.ಗೆ 350ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಇವರುಗಳಿಗೆ ನಿವೇಶನ ಒದಗಿಸುವ ಜವಾಬ್ದಾರಿಯೂ ಪ.ಪಂ. ಮೇಲಿದೆ. ಕಳೆದ 10 ವರ್ಷಗಳಿಂದ ಸೋಮವಾರಪೇಟೆ ಹಲವಷ್ಟು ಅಭಿವೃದ್ಧಿ ಕಾಮಗಾರಿಗೆ ತೆರೆದುಕೊಂಡಿದೆ. ಆದರೂ ಒಂದಿಷ್ಟು ಸಮಸ್ಯೆಗಳಿವೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ತಾ. 28ರಂದು ಚುನಾವಣೆ ನಡೆಯಲಿದೆ. ನೂತನ ಆಡಳಿತ ಮಂಡಳಿಯವರು ಈ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕಿದೆ. ನೂತನ ಆಡಳಿತ ಮಂಡಳಿಯೊಂದಿಗೆ ಜನಪ್ರತಿನಿಧಿಗಳು ಈ ಎಲ್ಲಾ ಸವಾಲುಗಳ ನಿವಾರಣೆಗೆ ಆದ್ಯತೆ ನೀಡಬೇಕಿದೆ.

- ವಿಜಯ್ ಹಾನಗಲ್