ಕೂಡಿಗೆ, ಅ. 30: ಸಮೀಪದ ಕೋವರಕೊಲ್ಲಿಯಿಂದ ಹುದಗೂರಿನವರೆಗೆ ಮುಖ್ಯರಸ್ತೆಯ ಇಕ್ಕೆಡೆಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಶುಚಿತ್ವ ಕಾರ್ಯ ನಡೆಯಿತು. ಎರಡೂ ಬದಿಗಳಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತೆ ಗಿಡಗಂಟಿಗಳು ರಸ್ತೆಗೆ ಹೊಂದಿಕೊಂಡಂತೆ ಬೆಳೆದು ನಿಂತಿದ್ದವು. ಅಲ್ಲದೆ ಕುಶಾಲನಗರದಿಂದ ಸೋಮವಾರಪೇಟೆಗೆ ತೆರಳುವ ಪ್ರವಾಸಿಗರು ಉಪಯೋಗಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ರಸ್ತೆ ಬದಿಯಲ್ಲಿ ಸುರಿದಿದ್ದು, ಸೋಮವಾರಪೇಟೆಯಿಂದ ಇತ್ತ ಬರುವವರು ಸಹ ಅರಣ್ಯವೆಂಬ ನೆಪದಲ್ಲಿ ರಸ್ತೆ ಬದಿಗೆ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಸುರಿದಿದ್ದರಿಂದ ಅರಣ್ಯ ಇಲಾಖೆಯವರು ರಸ್ತೆಯ ಎರಡೂ ಬದಿಯಲ್ಲಿ ಕಾಡು ಕಡಿದು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭ ಹುದಗೂರು ಉಪವಲಯ ಅರಣ್ಯಾಧಿಕಾರಿ ಸತೀಶ್ ಮತ್ತು ತಂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.