ಮಡಿಕೇರಿ, ಅ. 29: ಮಡಿಕೇರಿಯ ಹಳೆ ಬಸ್ ನಿಲ್ದಾಣದ ವಸ್ತುಗಳನ್ನು ನಗರಸಭಾ ಆಡಳಿತ ಮಂಡಳಿಯ ಅನುಮತಿಯಿಲ್ಲದೆ ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ ಅವರು ಮಾರಾಟಗೊಳಿಸಿರುವದು ಅಕ್ರಮವಾಗಿದೆ ಎಂದು ನಗರಸಭಾ ಆಡಳಿತ ಮಂಡಳಿ ಸದಸ್ಯ ಹೆಚ್. ಎಂ. ನಂದಕುಮಾರ್ ಆರೋಪಿಸಿದ್ದಾರೆ. ಒಡೆದ ಕಟ್ಟಡದಲ್ಲಿ. ಗ್ರಿಲ್‍ಗಳು, ರಾಡ್‍ಗಳು, ಕಿಟಕಿಗಳು ಮೊದಲಾದ ಸಾಮಗ್ರಿಗಳಿದ್ದವು. ಹರಾಜಿನಲ್ಲಿ ಮಾರಾಟಗೊಳಿಸಿದ್ದರೆ ಸುಮಾರು. ರೂ. 1.50 ಲಕ್ಷ ಮೌಲ್ಯ ಲಭ್ಯವಾಗುತ್ತಿತ್ತು. ಆದರೆ, ಸ್ಥಾಯಿ ಸಮಿತಿ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರದಿಂದ ನಗರ ಸಭೆಯ ಇತರ ಸದಸ್ಯರ ಗಮನಕ್ಕೆ ತಾರದೆ ವಸ್ತುಗಳನ್ನು ಕೇವಲ ರೂ. 40 ಸಾವಿರಕ್ಕೆ ಮಾರಾಟಗೊಳಿಸಿ ನಗರಸಭೆಗೆ ನಷ್ಟವುಂಟುಮಾಡಿದ್ದಾರೆ. ಅವರಿಗೆ ಕೇವಲ ರೂ. 5 ಸಾವಿರ ಪರಿಮಿತಿಯೊಳಗೆ ಅದೂ ಕೂಡ ನಗರಸಭಾಧ್ಯಕ್ಷರ ಗಮನಕ್ಕೆ ತಂದು ಯಾವದೇ ಕೆಲಸ ನಿರ್ವಹಿಸಬಹುದೇ ಹೊರತು, ಇಂತಹ ಪ್ರಮುಖ ಕಾಮಗಾರಿಗಳಲ್ಲಿ ನಗರಸಭೆಯ ಗಮನಕ್ಕೆ ತಂದು ಸಭೆಯಲ್ಲಿ ಚರ್ಚಿಸಿ ಅಗತ್ಯ ಬಿದ್ದರೆ ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಮಾಡಬಹುದೇ ಹೊರತು, ಇವರಿಗೆ ಇಂತಹ ನಿರ್ಧಾರ ತೆಗೆದುಕೊಳ್ಳುವ ಯಾವದೇ ಆಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾನು ಈ ಕುರಿತು ಅಗತ್ಯ ಬಿದ್ದರೆ ಪೊಲೀಸ್ ದೂರು ನೀಡುವದಾಗಿಯೂ ನಂದಕುಮಾರ್ ಮುನ್ನೆಚ್ಚರಿಕೆಯಿತ್ತಿದ್ದಾರೆ.

ಮಾರುಕಟ್ಟೆ ಕಾಮಗಾರಿ

ಇದೀಗ ಮಡಿಕೇರಿ ಮಾರುಕಟ್ಟೆಯ ನೂತನ ಮಳಿಗೆಗಳು ನೀರು ಸೋರುವಿಕೆ ಮತ್ತಿತರ ಸಮಸ್ಯೆಗಳಿಂದ ಇನ್ನೂ ವ್ಯಾಪಾರಿಗಳ ಅನುಕೂಲಕ್ಕೆ ತೆರೆÀಯಲ್ಪಟ್ಟಿಲ್ಲ. ಈ ಕುರಿತು ಅವರನ್ನು ಪ್ರಶ್ನಿಸಿದಾಗ ಇನ್ನು 15 ದಿನಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾ ಗುತ್ತದೆ. ಟೆಂಡರ್ ಕರೆದು ಶೀಟ್ ಗಳನ್ನು ಅಳವಡಿಸಿ, ಕಡಪಗಳನ್ನು ಹಾಕಿಸಿ ಸಂಪೂರ್ಣ ದುರಸ್ತಿ ಮಾಡಿ ಈ ಕಟ್ಟಡವನ್ನು ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ನಂದಕುಮಾರ್ ಆಶಾಭಾವನೆ ವ್ಯಕ್ತಪಡಿಸಿದರು.