ಸೋಮವಾರಪೇಟೆ, ಅ. 30: ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ 1 ರಂದು ಎಲ್ಲಾ ವಿದ್ಯಾಸಂಸ್ಥೆ, ಅಂಗಡಿ ಮುಂಗಟ್ಟು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಕನ್ನಡ ಪರ ಸಂಘಟನೆಗಳ ಕಚೇರಿಗಳಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನ ತೋರಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮನವಿ ಮಾಡಿದೆ.

ಇಲ್ಲಿನ ಕಸಾಪ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಬಗೆಗಿನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ನ. 1 ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕನ್ನಡ ಬಾವುಟ ಹಾರಿಸುವಂತಾಗಬೇಕು ಎಂದು ಮನವಿ ಮಾಡಿದರು.

ತಾಲೂಕು ಕಸಾಪ ಮತ್ತು ಪತ್ರಕರ್ತರ ಸಂಘದಿಂದ ಅಂದು ಬೆಳಿಗ್ಗೆ ಜಂಟಿಯಾಗಿ ಧ್ವಜಾರೋಹಣ ನೆರವೇರಲಿದೆ. ನವೆಂಬರ್ ತಿಂಗಳಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರ ಕಲೆ, ಕನ್ನಡ ಗೀತೆಗಳ ಗಾಯನ ಸ್ಪರ್ಧೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಗೌರವಿಸಲಾಗುವದು ಎಂದು ವಿಜೇತ್ ತಿಳಿಸಿದರು.

ಈ ಸಂದರ್ಭ ಕಸಾಪ ಪದಾಧಿಕಾರಿಗಳಾದ ಎಲ್.ಎಂ. ಪ್ರೇಮ, ಎ.ಪಿ. ವೀರರಾಜ್, ಜಲಾ ಕಾಳಪ್ಪ, ಹೆಚ್.ಸಿ. ನಾಗೇಶ್, ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಸಿ.ಸಿ. ನಂದಕುಮಾರ್, ಜೋಕಿಂ ವಾಸ್, ಸಿ.ಕೆ. ಮಲ್ಲಪ್ಪ, ನ.ಲ. ವಿಜಯ, ದಿನೇಶ್, ರಾಣಿ ರವೀಂದ್ರ, ಅಶ್ವಿನಿ ಕೃಷ್ಣಕಾಂತ್, ಅನಿತಾ ಶುಭಕರ್, ಸುಮಾ ಸುದೀಪ್, ಪ್ರಮುಖರಾದ ಶ್ರೀಕಂಠ ಸೇರಿದಂತೆ ಇತರರು ಉಪಸ್ಥಿತರಿದ್ದರು.