ಗೋಣಿಕೊಪ್ಪಲು, ಅ. 29: ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿರುವ ನೈಜ ಸಂತ್ರಸ್ತರಿಗೆ ಸೂಕ್ತ ನೆರವಿನೊಂದಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ, ಸಿ.ಎನ್.ಸಿ. ವತಿಯಿಂದ ಇಂದು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು.

ಕೊಡಗು ಸಂತ್ರಸ್ತರಿಗೆ ರಾಜ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿ ಹಾಗೂ ಕೆಲವು ಮಾಧ್ಯಮಗಳಿಂದ ಸಂಗ್ರಹಿಸಿರುವ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ ಎಂದು ಶಂಕೆಯನ್ನು ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಈ ವೇಳೆ ವ್ಯಕ್ತಪಡಿಸಿದರು.

ಸಂತ್ರಸ್ತರಿಗೆ ನ್ಯಾಯಕ್ಕಾಗಿ ಹೋರಾಟದೊಂದಿಗೆ ನ. 1 ರಂದು ದೆಹಲಿ ಚಲೋ ಕಾರ್ಯಕ್ರಮದ ಮೂಲಕ ಕೊಡವರ ಹಕ್ಕುಗಳ ಈಡೇರಿಕೆಗಾಗಿ ಆಗ್ರಹಿಸಲಾಗುವದು ಎಂದು ನಾಚಪ್ಪ ಘೋಷಿಸಿದರು.

ಮಾನವ ಸರಪಳಿ ಸಂದರ್ಭ ಸಾಯಿಶಂಕರ ವಿದ್ಯಾಶಾಲೆಯಲ್ಲಿ ಆಶ್ರಯ ಪಡೆದಿರುವ ಸುಮಾರು 75 ಸಂತ್ರಸ್ತ ಕುಟುಂಬದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನ.1 ರಂದು ನವದೆಹಲಿಯ ಜಂತರ್ ಮಂತರ್‍ನಲ್ಲಿ ಕೊಡಗು ಪ್ರತ್ಯೇಕ ಸ್ವಾಯತ್ತತೆ ಮತ್ತು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲು ಹಕ್ಕೋತ್ತಾಯ ಮಾಡಲಾಗುವದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಜ್ಜಿಕುಟ್ಟೀರ ಲೋಕೇಶ್, ಜಮ್ಮಡ ಮೋಹನ್, ಚಂಬಾಂಡ ಜನಕ್, ಮಾಚಿಮಾಡ ಲವಗಣಪತಿ, ಚೆಪ್ಪುಡೀರ ಕಿರಣ್ ಅಪ್ಪಯ್ಯ, ಪುಳ್ಳಂಗಡ ನಟೇಶ್, ಬೊಟ್ಟಂಗಡ ಗಿರೀಶ್ ಮುಂತಾದವರು ಉಪಸ್ಥಿತರಿದ್ದರು. ಕಾಂಡೇರ ಸುರೇಶ್ ಸ್ವಾಗತ ಹಾಗೂ ಕೊಲ್ಲೀರ ಕಾವೇರಪ್ಪ ಪ್ರಾರ್ಥಿಸಿದರು. ಪ್ರತಿಜ್ಞಾ ವಿಧಿ ಹಾಗೂ ದೇಶಭಕ್ತಿ ಗೀತೆಯನ್ನು ಹಾಡಲಾಯಿತು.

-ಟಿ.ಎಲ್.ಎಸ್., ಎನ್.ಎನ್.ಡಿ.