ಮಡಿಕೇರಿ, ಅ. 30: ಟಿಪ್ಪು ಜಯಂತಿ ಆಚರಣೆ ವಿವಾದಕ್ಕೆ ಸಂಬಂಧಿಸಿದಂತೆ ತಾ. 31 ರಂದು (ಇಂದು) ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಪಡಿಸಬೇಕೆಂದು ಕೋರಿ ಹೈಸೊಡ್ಲೂರುವಿನ ಕೆ.ಪಿ. ಮಂಜುನಾಥ್ (ಮಂಜು ಚಿಣ್ಣಪ್ಪ) ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಇದು ತಾ. 31 ರಂದು ಮತ್ತೆ ವಿಚಾರಣೆಗೆ ಬರುತ್ತಿದೆ. ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರು 2017 ರ ಅ. 24 ರಂದು ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಬೇಕೆಂದು ಕೋರಿ ಮಂಜು ಚಿಣ್ಣಪ್ಪ ಅವರು ಕಳೆದ ವರ್ಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ನಿಗದಿತ ಜಯಂತಿ ಸಮೀಪಿಸಿದ್ದ ಹಿನ್ನೆಲೆ ಆ ಬಾರಿ ಜಯಂತಿ ಆಚರಣೆಗೆ ನ್ಯಾಯಾಲಯ ಹಸಿರು ನಿಶಾನೆ ತೋರಿ ತ್ತಾದರೂ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿತ್ತು.ಅರ್ಜಿ ವಿಚಾರಣೆಗೆ ಕಾಲಾವಕಾಶ ಬೇಕೆಂಬ ಹಿನ್ನೆಲೆ ಈ ಕುರಿತು ನಾಲ್ಕು ವಾರದೊಳಗೆ ತಕರಾರು ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಲಾಗಿತ್ತು. ಆದರೆ ಕಳೆದ 12.10.18 ರಂದು ಈ ಪ್ರಕರಣದ ವಿಚಾರಣೆ ಎದುರಾದಾಗ ಸರಕಾರ ಇನ್ನೂ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆ ಮುಖ್ಯ ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ಪೀಠ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತ್ತು. ಇದೀಗ ತಾ. 31 ರಂದು (ಇಂದು) ಈ ಅರ್ಜಿಗೆ ಸಂಬಂಧಿಸಿದಂತೆ ಮತ್ತೆ ವಿಚಾರಣೆ ನಡೆಯಲಿದೆ. ರಾಜ್ಯ ಉಚ್ಚ ನ್ಯಾಯಾಲಯದ ಕೋಟ್ ನಂಬರ್ ಒಂದರಲ್ಲಿ ವಿಭಾಗೀಯ ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಿಗದಿಯಾಗಿದ್ದು ಕುತೂಹಲ ಮೂಡಿಸಿದೆ.