ಮೂರ್ನಾಡು, ಅ. 30: ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ದೊರಕುತ್ತಿದ್ದು, ಅದನ್ನು ಕ್ರೀಡಾಪಟು ಗಳು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಹೇಳಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಹಾಕಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾಸಂಸ್ಥೆಯಲ್ಲಿ ಕ್ರೀಡೆಗಾಗಿ ಅಕಾಡೆಮಿ ಸ್ಥಾಪನೆಯಾಗಿದ್ದು ಇದರ ಮುಖಾಂತರ ಕ್ರೀಡೆಗೆ ಎಲ್ಲಾ ಸೌಕರ್ಯಗಳನ್ನು ನೀಡಲಾಗುತ್ತಿದೆ. ಈ ತರಬೇತಿಯಿಂದ ಉತ್ತಮ ಕ್ರೀಡಾಪಟುಗಳಾಗುವದರೊಂದಿಗೆ ದೇಶಕ್ಕೆ ಕೀರ್ತಿ ತರುವಂತಾಗಬೇಕು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ಕ್ರೀಡಾಪಟುಗಳು ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಳ್ಳ ಬೇಕು.

ಕ್ರೀಡಾ ಕ್ಷೇತ್ರದಲ್ಲಿ ವಿಪುಲವಾದ ಅವಕಾಶ ಗಳಿವೆ. ಆಟ-ಪಾಠಗಳೆರಡಲ್ಲೂ ಸಮಾನತೆ ಕಾಯ್ದುಕೊಂಡಾಗ ಯಶಸ್ಸು ಸಾಧ್ಯ ಎಂದು ಹೇಳಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಜ. ತಿಮ್ಮಯ್ಯ ಕ್ರೀಡಾ ಅಕಾಡೆಮಿಯ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ವಾಲಿಬಾಲ್ ಆಟಗಾರ ಕಂಬಿರಂಡ ಯೋಗೇಶ್ ಅಪ್ಪಯ್ಯ, ದೈಹಿಕ ನಿರ್ದೇಶಕ ಮತ್ತು ಶಿಬಿರ ತರಬೇತುದಾರ ಕಂಬಿರಂಡ ಬೋಪಣ್ಣ, ಕಾಲೇಜಿನ ಆಂತರಿಕ ಗುಣಮಟ್ಟ ಮೌಲ್ಯಮಾಪನ ಸಮಿತಿ ಸಂಚಾಲಕ ನಾಟೋಳಂಡ ನವೀನ್, ಕಿಡ್ಸ್ ಎಡುಕೇರ್‍ನ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಉಪಸ್ಥಿತರಿದ್ದರು.

ತಾ. 9 ರಿಂದ 15 ರವರೆಗೆ ಆಂಧ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಅಂತರ ವಿಶ್ವವಿದ್ಯಾನಿಲಯದ ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ ವಿವಿಧ ಕಾಲೇಜಿನ 18 ಹಾಕಿ ಆಟಗಾರರನ್ನು ತಾ. 24 ರಿಂದ 7 ರವರೆಗೆ ತರಬೇತಿಯನ್ನು ತರಬೇತುದಾರ ಕಂಬಿರಂಡ ಬೋಪಣ್ಣ ನೇತೃತ್ವದಲ್ಲಿ ನೀಡಲಾಗುವದು.

ಪ್ರಾದ್ಯಾಪಕರಾದ ಹರೀಶ್ ಕಿಗ್ಗಾಲು ಸ್ವಾಗತಿಸಿ, ಸಾದೇರ ದರ್ಶನ್ ಕಾರ್ಯಕ್ರಮ ನಿರೂಪಿಸಿ, ನೆರ್ಪಂಡ ಹರ್ಷ ಮಂದಣ್ಣ ವಂದಿಸಿದರು.