ವೀರಾಜಪೇಟೆ, ಅ. 30: ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರ ಸುತ್ತ ಒಂದು ಗುಂಪು ವಿಷ ವರ್ತುಲವಾಗಿ ಕೆಲಸ ನಿರ್ವಹಿಸುತ್ತಿದ್ದು ಶಾಸಕರನ್ನು ನಿಯಂತ್ರಿಸುತ್ತಿದೆ. ಇವರಿಂದ ಶಾಸಕರು ಉಸಿರುಗಟ್ಟುವ ವಾತಾವರಣದಲ್ಲಿದ್ದಾರೆ ಎಂದು ಬಿಜೆಪಿ ಮಾಜಿ ವಕ್ತಾರ ಟಿ.ಪಿ ಕೃಷ್ಣ ಆರೋಪಿಸಿದ್ದು, ಈ ತನಕ ಬಿಜೆಪಿ ಪಕ್ಷಕ್ಕೆ ಸಲ್ಲಿಸಿದ ಸೇವೆಯಿಂದಲೇ ವಂಚಿತಗೊಂಡುದರಿಂದ ರಾಜಕೀಯದಿಂದಲೇ ನಿವೃತ್ತಿ ಹೊಂದಲು ಬಯಸಿರುವದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ಅವರು ಕಳೆದ 25ವರ್ಷಗಳಿಂದ ಪಕ್ಷದಲ್ಲಿ ನಗರ ಕಾರ್ಯದರ್ಶಿಯಾಗಿ, ಅಧ್ಯಕ್ಷನಾಗಿ, ತಾಲೂಕು ವಕ್ತಾರನಾಗಿ ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಿದ್ದೇನೆ. ಕಳೆದ ಬಾರಿಯು ಕೂಡ ಪಟ್ಟಣ ಪಂಚಾಯಿತಿಯ ಟಿಕೇಟ್ ಆಕಾಂಕ್ಷಿಯಾಗಿದ್ದೆ. ಅಂದಿನ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ತಾಲೂಕು ಅಧ್ಯಕ್ಷ ರಘು ನಾಣಯ್ಯ ಅವರುಗಳ ಮನವೋಲಿಕೆಯಿಂದಾಗಿ ಈ ಬಾರಿ ಟಿಕೇಟ್ ನೀಡುವ ಭರವಸೆಯಿಂದ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿ ಮುಂದುವರೆದೆ. ಮೂರು ತಿಂಗಳ ಹಿಂದೆಯೇ ಶಾಸಕರೇ ನನ್ನನ್ನು ವಾರ್ಡ್ 3ರಲ್ಲಿ ಈ ಬಾರಿಯ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಶಾಸಕರ ಭರವಸೆ ಮೇರೆ ಕ್ಷೇತ್ರದಲ್ಲಿ ಚುನಾವಣೆಯ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು.

ಮಾಜಿ ನಗರ ಕಾರ್ಯದರ್ಶಿ ಶಬರೀಶ್ ಮಾತನಾಡಿ ಶಾಸಕರ ಆಪ್ತರಾಗಿದ್ದು, ಸರಕಾರದ ಸಂಭಾವನೆ ಪಡೆದುಕೊಳ್ಳುವ ಕೆಲವು ವ್ಯಕ್ತಿಗಳಿಂದ ಪ್ರಾಮಾಣಿಕ ಕಾರ್ಯಕರ್ತರಿಗೆ ಉಳಿಗಾಲವಿಲ್ಲ; ಇವರಲ್ಲಿನ ಒಂದು ಗುಂಪು ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿ ಎಲ್ಲಾ ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದ ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ ಸೇರಿದಂತೆ ಅವರ ಬಳಗದ ಕೆಲವರನ್ನು ಕೂಡ ಮೂಲೆಗುಂಪು ಮಾಡಿದ್ದಾರೆ; ನಾನು ಕೂಡ ವಾರ್ಡ್ ಸಂಖ್ಯೆ 2ರಲ್ಲಿ ಆಕಾಂಕ್ಷಿಯಾಗಿದ್ದೆ. ನನಗೆ ಟಿಕೇಟ್ ನೀಡದೆ ಜುಲ್ಯೆ 16ರಂದು ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಶಾಸಕರಿಗೆ ನಡೆದ ಅಭಿನಂದನಾ ಸಭೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ವಿಷ್ಣು ಅವರಿಗೆ ಪಕ್ಷದಿಂದ ಟಿಕೆಟ್ ನೀಡಿದ್ದಾರೆ. ನಾವು ಪಕ್ಷದ ಸಿದ್ಧಾಂತಗಳನ್ನು ವಿರೋಧಿಸುತ್ತಿಲ್ಲ. ಕಳೆದ ಬಾರಿ ಬಿಜೆಪಿ ಚಿಹ್ನೆ ಅಡಿ ಸ್ಪರ್ಧಿಸಿದರೆ ಗೆಲ್ಲುವದಿಲ್ಲ ಎಂದು ಹೇಳಿದವರಿಗೆ ಈ ಬಾರಿ ವಾರ್ಡ್ 1ರಲ್ಲಿ ಬಿಜೆಪಿಯಿಂದ ಟಿಕೇಟ್ ನೀಡಿದ್ದಾರೆ ಎಂದರು.

ಮಾಜಿ ನಗರ ಕಾರ್ಯದರ್ಶಿ ಯೋಗೇಶ್ ನಾಯ್ಡು ಮಾತನಾಡಿ ದಶಕಗಳಿಂದ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿರುವ ನನ್ನ ವಾರ್ಡ್ ನಂ. 8ರಲ್ಲಿ ಟಿಕೇಟ್ ನೀಡದೆ ಚುನಾವಣೆಗಾಗಿ ವಲಸೆ ಬಂದವರಿಗೆ ಟಿಕೇಟ್ ನೀಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಿತವಾದ ಬಲಿಜ ನಾಯ್ಡು ಸಮಾಜವನ್ನು ಕಡೆಗಣಿಸಿ ಅಪಮಾನ ಮಾಡಿದ ಕಾರಣ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು. ಗೋಷ್ಠಿಯಲ್ಲಿ ಟಿ.ಜೆ ವೆಂಕಟೇಶ್ ಉಪಸ್ಥಿತರಿದ್ದರು.