ಮಡಿಕೇರಿ, ಅ. 30: ನಗರದ ಮಾರುಕಟ್ಟೆಯ ಮುಂದುವರಿದ ಕಮಗಾರಿಗೆ ನಗರಸಭೆಯಿಂದ ಟೆಂಡರ್ ಕರೆಯಲಾಗಿದ್ದು, ನವೆಂಬರ್ 2 ರಂದು ಟೆಂಡರ್ ತೆರೆದ ಬಳಿಕ ಕಾಮಗಾರಿಗೆ ಚಾಲನೆ ನೀಡಲಿದ್ದು, ಕಾಂಗ್ರೆಸ್ ಸದಸ್ಯ ಹೆಚ್.ಎಂ. ನಂದಕುಮಾರ್ ಅವರ ಕೊಡುಗೆ ಏನೂ ಇಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ತಾ. 30ರ ‘ಶಕ್ತಿ’ಯಲ್ಲಿ ನಂದಕುಮಾರ್ ಅವರು 15 ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವದು ಎಂದಿರುವ ಬಗ್ಗೆ ಹೇಳಿಕೆ ನೀಡಿರುವ ಉಣ್ಣಿ, ನಂದಕುಮಾರ್ ಸಾಮಾನ್ಯ ಸದಸ್ಯನಾಗಿದ್ದು, ಈ ವಿಭಾಗಕ್ಕೆ ಸಂಬಂಧಿಸದಿದ್ದರೂ ಅಧ್ಯಕ್ಷರಂತೆ ಹೇಳಿಕೆ ನೀಡಿರುವದನ್ನು ಖಂಡಿಸುವದಾಗಿ ತಿಳಿಸಿದ್ದಾರೆ.

ಕಬ್ಬಿಣ ಮಾರಾಟವಾಗಿಲ್ಲ

ಖಾಸಗಿ ಬಸ್ ನಿಲ್ದಾಣದ ಹಳೇ ಕಟ್ಟಡ ಕೆಡವಿದ ಸಂದರ್ಭ ಅಲ್ಲಿ ಲಭ್ಯವಾದ ಹಳೇ ಕಬ್ಬಿಣವನ್ನು ಮಾರಾಟ ಮಾಡಲು ಟೆಂಡರನ್ನು ನಮೂದಿಸದೆ ಇದ್ದರೂ, ನಗರಸಭೆಗೆ ಆದಾಯ ಬರಲಿ ಎಂದು ತಾನು ಅವುಗಳನ್ನು ಫಿಲ್ಟರ್ ಹೌಸ್‍ನಲ್ಲಿ ಶೇಖರಿ ಸಿಡಲು ವ್ಯಾಪಾರಿಗೆ ಸೂಚಿಸಿದ್ದು, ಈ ಬಗ್ಗೆ ಆಯುಕ್ತರ ಗಮನಕ್ಕೂ ತಂದಿದ್ದು, ಕಾನೂನಿನಂತೆ ವಿಲೇವಾರಿ ಮಾಡಲು ಸೂಚಿಸಿದ್ದಾಗಿ ಹೇಳಿದ್ದಾರೆ. ತನ್ನ ಆಸಕ್ತಿ ಇಲ್ಲದಿದ್ದಲ್ಲಿ ಹಳೇ ಕಬ್ಬಿಣ ಮಣ್ಣು ಪಾಲಾಗುತ್ತಿತ್ತು.

ನಗರಸಭೆಗೆ ಆದಾಯ ತರುವ ತನ್ನ ಪ್ರಯತ್ನ ವನ್ನು ನಂದಕುಮಾರ್ ಪ್ರಶ್ನಿಸಿದ್ದು, ಅವರ ಅಧ್ಯಕ್ಷಾವಧಿಯಲ್ಲಿ ಇಂತಹ ಯಾವ ಆದಾಯವನ್ನು ತಂದಿದ್ದಾರೆ ಎಂದು ಮರು ಪ್ರಶ್ನಿಸಿದ್ದಾರೆ. ತಾನು ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಓಂಕಾರೇಶ್ವರ ದೇವಾಲಯ ಸಮೀಪದ ರಸ್ತೆ ವಿಸ್ತರಿಸಿ, ಗೋಡೆ ನಿರ್ಮಿಸಲು ಬಳಸಿದ್ದ ಕಲ್ಲುಗಳನ್ನು ನಗರಸಭೆ ವಶಕ್ಕೆ ಒಪ್ಪಿಸಿದ್ದೇನೆ.

ನಂದಕುಮಾರ್ ಅವರ ಅವಧಿಯಲ್ಲಿ ಲಭ್ಯವಾಗಿದ್ದ ಇಂತಹ ಕಲ್ಲುಗಳು ಎಲ್ಲಿ ಹೋದವು ಎಂದು ಅವರು ಉತ್ತರಿಸುವಂತೆ ಉಣ್ಣಿಕೃಷ್ಣ ಆಗ್ರಹಿಸಿದ್ದಾರೆ.