ಸೋಮವಾರಪೇಟೆ, ಅ. 29: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಟ್ಟಡದಲ್ಲಿರುವ ಜಾತ್ಯತೀತ ಜನತಾದಳ ಕಚೇರಿ ಎದುರು ನಿಲುಗಡೆಗೊಂಡಿದ್ದ ಮಾರುತಿ ಓಮ್ನಿ ಕಾರಿನಲ್ಲಿ ಅನಿಲ ಸೋರಿಕೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಜೆಡಿಎಸ್ ಕಚೇರಿ ಎದುರು ನಿಲುಗಡೆಗೊಂಡಿದ್ದ ಕೃಷ್ಣಪ್ಪ ಎಂಬವರಿಗೆ ಸೇರಿದ ಕಾರಿನಲ್ಲಿ ಇಂದು ಮಧ್ಯಾಹ್ನ ಅನಿಲ ಸೋರಿಕೆಯಾಗಿದ್ದು, ಅಗ್ನಿ ಅವಘಡ ಸಂಭವಿಸುವ ಆತಂಕ ಎದುರಾಗಿತ್ತು. ತಕ್ಷಣ ಪಕ್ಕದಲ್ಲಿರುವ ನಾಗೇಶ್ ಕ್ಯಾಂಟೀನ್‍ನಲ್ಲಿದ್ದ ಸ್ಟೌವ್‍ನ್ನು ಬಂದ್ ಮಾಡಿ, ಯಾರೂ ದೂಮಪಾನಕ್ಕಾಗಿ ಬೆಂಕಿ ಕಡ್ಡಿ ಗೀರದಂತೆ ಎಚ್ಚರಿಕೆ ವಹಿಸಲಾಯಿತು. (ಮೊದಲ ಪುಟದಿಂದ) ಈ ಸಂದರ್ಭ ಕಚೇರಿಯಲ್ಲಿದ್ದ ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಸೇರಿದಂತೆ ಇತರರು ಹೊರಬಂದರು. ಕಾರಿನ ಬಳಿ ನಿಲುಗಡೆಯಾಗಿದ್ದ ಇತರ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸುವ ಮುನ್ನ ಕಾರಿನ ಹಿಂಭಾಗದ ಗಾಜನ್ನು ಒಡೆದು ಕಾರಿನೊಳಗೆ ಶೇಖರಣೆಗೊಂಡಿದ್ದ ಅನಿಲವನ್ನು ಹೊರಹಾಕಲಾಯಿತು. ನಂತರ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡ ನಂತರ ಪರಿಸ್ಥಿತಿ ತಿಳಿಯಾಯಿತು.