ಮಡಿಕೇರಿ, ಅ. 30: ಮುಂದಿನ ವರ್ಷದಲ್ಲಿ ಗೌಡ ಮಹಿಳಾ ಸಮಾವೇಶ ಏರ್ಪಡಿಸಲು ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡುವಂತಾಗಬೇಕೆಂದು ಮಡಿಕೇರಿ ನಗರಸಭಾಧ್ಯಕ್ಷೆ, ಕೊಡಗು ಗೌಡ ಮಹಿಳಾ ಒಕ್ಕೂಟದ ಪದಾಧಿಕಾರಿಯೂ ಆಗಿರುವ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹೇಳಿದರು.

ಇಲ್ಲಿನ ಗೌಡ ಸಮಾಜದಲ್ಲಿ ಕೊಡಗು ಗೌಡ ಮಹಿಳಾ ಸಮಾಜದ 20ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೌಡ ಜನಾಂಗದ ಮಹಿಳೆಯರ ಸಂಘಟನೆಯೊಂದಿಗೆ ಆಚಾರ-ವಿಚಾರ, ಸಂಸ್ಕøತಿಯನ್ನು ಉಳಿಸಿ-ಬೆಳೆಸುತ್ತಾ ಮುಂದಿನ ಪೀಳಿಗೆಗೆ ತಲಪಿಸುವ ನಿಟ್ಟಿನಲ್ಲಿ ಕಷ್ಟಪಟ್ಟು ಒಕ್ಕೂಟವನ್ನು ರಚಿಸಲಾಗಿದೆ. ಮಹಿಳೆಯರು ಎಲ್ಲ ಸ್ತರಗಳಲ್ಲೂ ಎದೆಗುಂದದೆ ಮುಂದೆ ಬರಬೇಕು. ಸಾಧನೆ ಮಾಡುವವರಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರುಗಳು ಹಲವಾರು ಸಲಹೆ-ಸೂಚನೆಗಳನ್ನು ನೀಡಿದರು.

ಇದೇ ಸಂದರ್ಭ ಮುಂದಿನ 2018-2021ರ ಸಾಲಿನ ಆಡಳಿತ ಮಂಡಳಿಗೆ ಆಯ್ಕೆ ಪ್ರಕ್ರಿಯೆ ನಡೆದು ಪ್ರಸ್ತುತ ಇರುವ ಆಡಳಿತ ಮಂಡಳಿಯನ್ನೇ ಮುಂದುವರೆಸುವಂತೆ ಸದಸ್ಯರುಗಳು ನೀಡಿದ ಒಪ್ಪಿಗೆ ಮೇರೆಗೆ ಹಾಲಿ ಆಡಳಿತ ಮಂಡಳಿಯನ್ನು ಮುಂದುವರೆಸಲು ತೀರ್ಮಾನಿಸ ಲಾಯಿತು.

ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ಸಾಧನೆ ತೋರಿದ ಒಕ್ಕೂಟದ ಸಹಕಾರ್ಯದರ್ಶಿ ಕೊಂಪುಳಿರ ಇಂದಿರಾ ರಮೇಶ್ ಹಾಗೂ ಪಾಂಡನ ಪುಷ್ಪವೇಣಿ ಅವರುಗಳನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಪದಾಧಿಕಾರಿಗಳಾದ ಬೈತಡ್ಕ ಜಾನಕಿ, ಕುದುಪಜೆ ಶಾಂತಿ ಬೋಜಮ್ಮ, ಕೇಕಡ ಇಂದುಮತಿ, ಕೋಳಿಬೈಲು ಹರಿಣಿ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಪಾಲ್ಗೊಂಡಿದ್ದರು.