ಗೋಣಿಕೊಪ್ಪ ವರದಿ, ಅ. 29: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ 10ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಜಪ್ಪು ಸುಬ್ಬಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಹಿನ್ನೆಲೆ ಅದ್ಧೂರಿಯಾಗಿ ಆಚರಿಸುತ್ತಿದ್ದ ರಾಜ್ಯೋತ್ಸವವನ್ನು ಈ ಬಾರಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ತಾ.30 ರಂದು ಇಲ್ಲಿನ ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ಗೋಣಿಕೊಪ್ಪಲುವಿನ ಸ್ಥಳೀಯ ಆಟೋ ಚಾಲಕರ ತಂಡಗಳಿಗೆ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ. ನವೆಂಬರ್ 1 ರಂದು ಕನ್ನಡ ಧ್ವಜದಿಂದ ಅಲಂಕೃತಗೊಂಡ ಆಟೋಗಳ ಮೆರವಣಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸಾಗಿ ಆಟೋ ನಿಲ್ದಾಣಕ್ಕೆ ತಲಪಲಿದೆ. ನಂತರ ಗಣ್ಯರಿಂದ ಕನ್ನಡ ಧ್ವಜಾರೋಹಣ ನಡೆಯಲಿದೆ. ಈ ಸಂದರ್ಭ ಕಲಾತಂಡಗಳಿಂದ ಡೊಳ್ಳು ಕುಣಿತ , ವಿದ್ಯಾರ್ಥಿಗಳಿಗೆ ಛದ್ಮವೇಷ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ವಿ ಸುರೇಶ್, ಕನ್ನಡ ರಾಜ್ಯೋತ್ಸವ ಸಮಿತಿ ಕಾರ್ಯದರ್ಶಿ ಕೆ.ವೈ ಅಶ್ವತ್, ಖಜಾಂಜಿ ಹೆಚ್.ಆರ್. ಜಯಣ್ಣ ಇದ್ದರು.