ಸಿದ್ದಾಪುರ, ಅ. 29 : ಸಿದ್ದಾಪುರ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿಯು ಕಡಿಮೆಯಾಗಿತ್ತು. ಇದೀಗ ಮತ್ತೊಮ್ಮೆ ಕಾಡಾನೆ ಹಿಂಡು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದು ಸ್ಥಳೀಯ ನಿವಾಸಿಗಳು ಸೇರಿ ತೋಟಕಾರ್ಮಿಕರು ಭಯಭೀತರಾಗಿದ್ದಾರೆ.

ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಬಿಬಿಟಿಸಿ ಸಂಸ್ಥೆಗೆ ಸೇರಿದ ಚೌಡಿಕಾಡು,ಪ್ಯಾರಲ್ಯಾಂಡ್ಸ್ ಕಾಫಿ ತೋಟಗಳಲ್ಲಿ ಮರಿಯಾನೆ ಸೇರಿದಂತೆ ಹತ್ತಕ್ಕೂ ಅಧಿಕ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಆತಂಕ ಸೃಷ್ಟಿಯಾಗಿದೆ. ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಯದಿಂದಲೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರದಂದು ಬೆಳಿಗ್ಗೆ ಯುವತಿಯೊಬ್ಬಳು ಸಿದ್ದಾಪುರಕ್ಕೆ ಕೆಲಸಕ್ಕೆಂದು ಕಾಲ್ನಡಿಗೆಯಲ್ಲಿ ಬರುತ್ತಿದ್ದ ಸಂದರ್ಭ ಕಾಡಾನೆ ಹಿಂಡು ದಿಢೀರನೆ ಪ್ರತ್ಯಕ್ಷಗೊಂಡು ಕೂದಲೆಳೆಯ ಅಂತರದಿಂದ ಪಾರಾಗಿದ್ದಾಳೆ. ಕಳೆದ ಕೆಲವು ದಿನಗಳಿಂದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದೆ ಎನ್ನಲಾಗಿದೆ. ಕಾಡಾನೆಗಳ ಹಿಂಡಿನೊಂದಿಗೆ ರೇಡಿಯೋ ಕಾಲರ್ ಅಳವಡಿಸಿದ ಆನೆಯು ಕಾಣಿಸಿಕೊಂಡಿದ್ದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕೂಡಲೇ ಕಾಡಿಗೆ ಅಟ್ಟಬೇಕು ಹಾಗೂ ಉಪಟಳ ನೀಡುತ್ತಿರುವ ಪುಂಡಾನೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

- ವರದಿ : ವಾಸು.ಎ.ಎನ್