ಕೂಡಿಗೆ, ಅ. 29: ಹೆಬ್ಬಾಲೆ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಮಿಷನ್ ಅಂತ್ಯೋದಯದ ನಮ್ಮ ಗ್ರಾಮ-ನಮ್ಮ ಯೋಜನೆಗೆ ಸಂಬಂಧಿಸಿದಂತೆ ಕರಡು ಯೋಜನೆಯನ್ನು ತಯಾರಿಸುವ ಹಿನ್ನೆಲೆ ವಿಶೇಷ ಗ್ರಾಮಸಭೆಯನ್ನು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಗ್ರಾಮಸ್ಥರಾದ ಶಿವಣ್ಣ, ಚನ್ನರಾಜ್, ಲೊಕೇಶ್ ಮಾತನಾಡಿ, 2011ರಲ್ಲಿ ಹೆಬ್ಬಾಲೆ ಗ್ರಾಮವು ನೀರಾವರಿ ಪ್ರದೇಶವಲ್ಲ ಎಂದು ಘೋಷಣೆಯಾಗಿತ್ತು. ಇದೀಗ ಈ ಪ್ರದೇಶವು ನೀರಾವರಿ ಪ್ರದೇಶವಾಗಿದ್ದು, ಹಾರಂಗಿ ನೀರಾವರಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ್ದಾಗಿದೆ. ಈ ಹಿನ್ನೆಲೆ ನೀರಾವರಿ ನಿಗಮ ಹಾಗೂ ಗ್ರಾಮ ಪಂಚಾಯಿತಿಯವರು ವಿವಿಧ ಗ್ರಾಮಗಳ ಸಂಪರ್ಕ ರಸ್ತೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಾತನಾಡಿ, ವಿಶೇಷ ಗ್ರಾಮ ಸಭೆಯಲ್ಲಿ ನಮ್ಮ ಗ್ರಾಮ-ನಮ್ಮ ಯೋಜನೆಯ ಕಾಮಗಾರಿಯ ಕ್ರಿಯಾ ಯೋಜನೆಯನ್ನು ಕೈಗೊಂಡು ಸಮರ್ಪಕವಾಗಿ ಆಗಬೇಕಾದ ಕಾಮಗಾರಿಗಳನ್ನು ಕೈಗೊಳ್ಳಲಾಗುವದು ಸದಸ್ಯರ ಸಲಹೆ ಮೇರೆಗೆ ಆಯಾ ವಾರ್ಡುಗಳ ಕಾಮಗಾರಿಗಳನ್ನು ಕೈಗೊಳ್ಳಲಾಗುವದು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಮಾತನಾಡಿ, ಗ್ರಾಮದ ವಾರ್ಡ್‍ಗಳ ಮಾಹಿತಿಗಳನ್ನು ನೀಡಿದರು. ಅಲ್ಲದೆ, ಕ್ರಿಯಾ ಯೋಜನೆಯ ಅನುಮೋದನೆ ಮತ್ತು ಆಯಾ ವಾರ್ಡುಗಳ ಪ್ರಮುಖ ಕಾಮಗಾರಿಗಳ ವಿವರಗಳನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿದ್ದ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಭೆಗೆ ಮಂಡಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ, ಸದಸ್ಯರಾದ ವಿಜಯ, ವೆಂಕಟೇಶ್, ಶಿವನಂಜಪ್ಪ, ಚೇತನ್, ದೇವಮ್ಮ, ಪ್ರಮೀಳಾ ಹಾಗೂ ಗ್ರಾಮಸ್ಥರು ಇದ್ದರು.