ಕುಶಾಲನಗರ, ಅ. 30: ಪ್ರಕೃತಿಯ ಬದಲಾವಣೆ ಸಹಜವಾಗಿದ್ದು ಅದರೊಂದಿಗೆ ಬದುಕು ಸಾಗಿಸುವದು ಮಾನವನಿಗೆ ಅನಿವಾರ್ಯ ಎಂದು ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕಾಲೂರು ಗ್ರಾಮದ ಪ್ರಕೃತಿ ವಿಕೋಪ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸಂತ್ರಸ್ತ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು. ಸಮಿತಿ ಮೂಲಕ ಪರಿಸ್ಥಿತಿಯ ಬಗ್ಗೆ ತಮಿಳುನಾಡು ಮತ್ತು ಕೇಂದ್ರ ಸರಕಾರಗಳಿಗೆ ಮನವಿ ಸಲ್ಲಿಸುವ ಮೂಲಕ ಗಮನ ಸೆಳೆಯುವದರೊಂದಿಗೆ ಮೂಲ ಕಾವೇರಿ ಭಾಗದಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಕಲ್ಪಿಸಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು.

ಈ ಸಂದರ್ಭ ಮಾತನಾಡಿದ ಗ್ರಾಮದ ಹಿರಿಯರಾದ ನಾಗೇಶ್ ಕಾಲೂರು, ಗ್ರಾಮದ ಜನತೆ ಬಹುತೇಕ ಮೂಲಭೂತ ವ್ಯವಸ್ಥೆಗಳನ್ನು ಕಳೆದುಕೊಳ್ಳುವದರೊಂದಿಗೆ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮದ ಪುನರ್ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವ ಅವಶ್ಯಕತೆಯಿದೆ. ಹಾರಂಗಿ ಅಣೆಕಟ್ಟು ಹಿನ್ನೀರಿನಿಂದ ಅವಘಡಗಳು ಉಂಟಾಗಿರುವ ಸಾಧ್ಯತೆ ಇರುವದಾಗಿ ಸಂಶಯ ವ್ಯಕ್ತಪಡಿಸಿದ ಅವರು, ಮತ್ತೆ ಇಂತಹ ದುರಂತಗಳು ಮರುಕಳಿಸದಂತೆ ಎಚ್ಚರ ವಹಿಸುವ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ಕುಶಾಲನಗರ ಕೊಡವ ಸಮಾಜದ ಉಪಾಧ್ಯಕ್ಷ ಅಯಿಲಪಂಡ ಮಂದಣ್ಣ ಸ್ಥಳೀಯ ಜನರಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸಾಧುಸಂತರ ತಂಡದ ಸದಸ್ಯರಿಗೆ ಮಾಹಿತಿ ಒದಗಿಸಿದರು. ಸಾಧುಸಂತರ ತಂಡ ಗ್ರಾಮದ ಹಲವು ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವದರೊಂದಿಗೆ ದಿನಬಳಕೆ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಈ ಸಂದರ್ಭ ಕುಶಾಲನಗರ ಕೊಡವ ಸಮಾಜ ಮಾಜಿ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ. ಎನ್. ಚಂದ್ರಮೋಹನ್, ಅಖಿಲ ಭಾರತ ಸನ್ಯಾಸಿ ಸಂಘದ ಸದಸ್ಯರು, ಕಾರ್ಯಕರ್ತರು ಇದ್ದರು.