ಮಡಿಕೇರಿ, ಅ. 31: ಮಡಿಕೇರಿಯ ತಿರಿಬೊಳ್‍ಚ ಕೊಡವ ಸಂಘ, ಕೊಡವ ಮಕ್ಕಡ ಕೂಟ, ಜನಮನ ಕಲಾ ಸಂಘ, ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆ ಮತ್ತು ಕಕ್ಕಬೆ ದಿ. ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್‍ನ ಸಂಯುಕ್ತ ಆಶ್ರಯದಲ್ಲಿ ತಾ. 1 ರಂದು (ಇಂದು) ಕಕ್ಕಬೆ ಪ್ರೌಢಶಾಲಾ ಆವರಣದಲ್ಲಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುವದು.

ಬೆಳಿಗ್ಗೆ 9 ಗಂಟೆಗೆ ಕಕ್ಕಬೆಯ ನೆಲಜಿ ಜಂಕ್ಷನ್‍ನಿಂದ ಪ್ರೌಢಶಾಲಾ ಆವರಣದವರೆಗೆ ಸಾಂಸ್ಕøತಿಕ ಮೆರವಣಿಗೆ, ಪ್ರೌಢಶಾಲಾ ಆವರಣದಲ್ಲಿ ಕೊಡವ ಪುಸ್ತಕ ಪ್ರದರ್ಶನ, ಪೂರ್ವಾಹ್ನ 10 ಗಂಟೆಗೆ ಸಭೆ, ಕವಿಯ ಸ್ಮರಣೆಗೆ ಕಿರುಪುಸ್ತಕ ಬಿಡುಗಡೆ, ಕೊಡವ ಅರಿವೋಲೆ, ಲೇಖಕರಾದ ಡಾ. ಬೊವ್ವೇರಿಯಂಡ ಸಿ. ಉತ್ತಯ್ಯ - ತಂಗಮ್ಮ ಉತ್ತಯ್ಯ ದಂಪತಿಗಳಿಗೆ ಸನ್ಮಾನ ಇತ್ಯಾದಿ ನಡೆಯಲಿದೆ.

ಭೋಜನಾ ನಂತರ ಅಪರಾಹ್ನ 2 ಗಂಟೆಗೆ ಕೊಡವ ಭಾಷೆಯಲ್ಲಿ ಗಾಯನ ಸ್ಪರ್ಧೆ, ಕೊಡವ ನಾಟಕ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ಡ್ಯಾನ್ಸ್ ಪ್ರದರ್ಶನ, ಮಿಮಿಕ್ರಿ ಪ್ರದರ್ಶನ, ಏಕಪಾತ್ರಾಭಿನಯ ಪ್ರದರ್ಶನ, ಕೊಡವ ಹರಿಕಥೆ ಪ್ರದರ್ಶನ, ಕೊಡವ ಆರ್ಕೆಸ್ಟ್ರಾ, ಅಪ್ಪಚ್ಚ ಕವಿಯ ಕುರಿತಾದ ಡಾಕ್ಯುಮೆಂಟರಿ ಫಿಲಂ ಪ್ರದರ್ಶನ ಇತ್ಯಾದಿ ನಡೆಯಲಿದೆ.

ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ, ಕೊನೆಯಲ್ಲಿ ಕೊಡವ ವಾಲಗತಾಟ್ ಪ್ರದರ್ಶನ ಇದೆ. ಜಿಲ್ಲಾಮಟ್ಟದ ಸಾಹಿತ್ಯಕ ಕಾರ್ಯಕ್ರಮಕ್ಕೆ ಸಾಹಿತ್ಯಾಭಿಮಾನಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಮಡಿಕೇರಿ ತಿರಿಬೊಳ್‍ಚ ಕೊಡವ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ತಿಳಿಸಿದ್ದಾರೆ.