ಮಡಿಕೇರಿ, ಅ.31: ವೀರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಗಳಲ್ಲಿ ಪ್ರತಿ ಪಕ್ಷಗಳ ಬಲ ಹೀನತೆಯಿಂದಾಗಿ ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ್ದ ಬಿ.ಜೆ.ಪಿಗೆ ಇದೀಗ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಲಗ್ಗೆ, ಇನ್ನು ಕೆಲವೆಡೆ ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಬಿಜೆಪಿ ಮತ್ತೆ 3 ಕಡೆ ಆಡಳಿತ ಚುಕ್ಕಾಣಿ ಹಿಡಿಯುವದು ಕಷ್ಟಸಾಧ್ಯವಾಗಿದೆ. ಮತದಾರರ ಬದಲಾದ ತೀರ್ಪಿಗೆ ಬಿಜೆಪಿ ವರಿಷ್ಠರು ಬೆಚ್ಚಿ ಬೀಳುವಂತಾಗಿದೆ ಆತ್ಮಾವಲೋಕನ ಮಾಡಿಕೊಳ್ಳುವ ಪರಿಸ್ಥಿತಿ ಒದಗಿದೆ. ಅಲ್ಲದೆ, ಕಾಂಗ್ರೆಸ್- ಜೆ.ಡಿ.ಎಸ್ ಮೈತ್ರಿ ಕೂಟದ ಪ್ರಭಾವ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪೂರ್ವಭಾವೀ ಮೈತ್ರಿ ಕೂಟದ ಒಪ್ಪಂದ ಮಾಡಿಕೊಂಡಿದ್ದುದರಿಂದ ಇದೀಗ ಆಡಳಿತ ಚುಕ್ಕಾಣಿ ಹಿಡಿಯಲು ಯಾವದೇ ಅಡ್ಡಿ ಆತಂಕಗಳಿಲ್ಲ. ಕಾಂಗ್ರೆಸ್ (4), ಜೆ.ಡಿ.ಎಸ್. (3) ಸ್ಥಾನಗಳೊಂದಿಗೆ ಮೈತ್ರಿ ಕೂಟವು ಒಟ್ಟು 7 ಸ್ಥಾನಗಳನ್ನು ಗಳಿಸಿದ್ದು, 11 ವಾರ್ಡ್‍ಗಳ ಪಟ್ಟಣ ಪಂಚಾಯಿತಿಯ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಕಳೆದ ಅವಧಿಯಲ್ಲಿ ಬಿ.ಜೆ.ಪಿ.ಯು 4 ಸ್ಥಾನ ಗಳಿಸಿದ್ದು ಇತರ ಪಕ್ಷಗಳ ಹಾಗೂ ಪಕ್ಷೇತರರ ಬೆಂಬಲದಿಂದ ಆಡಳಿತ ನಡೆಸಲು ಸಫಲವಾಗಿತ್ತು. ಈ ಬಾರಿ ಕೇವಲ 3 ಸ್ಥಾನಗಳಿಗೆ ಬಿ.ಜೆ.ಪಿ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಕುಶಾಲನಗರದ ಒಟ್ಟು 16 ವಾರ್ಡ್‍ಗಳ ಪೈಕಿ ಬಿ.ಜೆ.ಪಿ. ಹಾಗೂ ಕಾಂಗ್ರೆಸ್ 6 ಸ್ಥಾನ ಗಳಿಸಿದ್ದು, ಸಮಬಲ ಸಾಧಿಸಿವೆ.

(ಮೊದಲ ಪುಟದಿಂದ) ಆದರೆ ಜೆ.ಡಿ.ಎಸ್. 4 ಸ್ಥಾನ ಗಳಿಸಲು ಯಶಸ್ವಿಯಾಗಿದೆ. ಈ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿದ್ದವು. ಇದೀಗ ರಾಜ್ಯ ಮಟ್ಟದಲ್ಲಿಯೇ ಇತರ ಎಲ್ಲ ಕಡೆ ಕಾಂಗ್ರೆÉಸ್ ಹಾಗೂ ಜೆ.ಡಿ.ಎಸ್. ಮೈತ್ರಿ ಸಾಧಿಸಿರುವದರಿಂದ ಬಹುಪಾಲು ಕುಶಾಲನಗರದಲ್ಲಿಯೂ ಸಂಧಾನದ ಮೂಲಕ ಈ ಎರಡು ಪಕ್ಷಗಳು ಚುನಾವಣಾ ಬಳಿಕದ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದಿನ ಅವಧಿಯಲ್ಲಿ ಒಟ್ಟು 13 ವಾರ್ಡ್‍ಗಳು ಮಾತ್ರವಿದ್ದು, ಆಗ ಬಿ.ಜೆ.ಪಿ, 6 ಸ್ಥಾನ ಗಳಿಸಿತ್ತು. ಈಗ ವಾರ್ಡ್‍ಗಳ ಸಂಖ್ಯೆ ಜಾಸ್ತಿಯಾಗಿದ್ದರೂ ಬಿ.ಜೆ.ಪಿ, ಅಷ್ಟೇ ಸ್ಥಾನ ಗಳಿಸಿ ಪಕ್ಷದ ಬಲ ಕುಂಠಿತಗೊಂಡಿದೆ. ಕಳೆÉದ ಅವಧಿಯಲ್ಲಿ ಬಿ.ಜೆ.ಪಿ. ಇತರ ಪಕ್ಷಗಳ ಸದಸ್ಯರ ಬೆಂಬಲದಿಂದ ಅಧಿಕಾರ ನಡೆಸಿತ್ತು. ಆದರೆ ಇದೀಗ ಅಂತಹ ಯಾವದೇ ಅವಕಾಶವಿಲ್ಲದಿರುವದರಿಂದ ಮೈತ್ರಿ ಕೂಟವೇ ಆಡಳಿತ ನಡೆಸುವ ಸಾಧ್ಯತೆ ಬಲವಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಆಡಳಿತ ಅತಂತ್ರದ ಹಾದಿ ಹಿಡಿದಿದೆ. ಒಟ್ಟು 18 ವಾರ್ಡ್‍ಗಳ ಪೈಕಿ ಬಿ.ಜೆ.ಪಿ. ಅಧಿಕ ಸ್ಥಾನವಾದ 8 ಸ್ಥಾನ ಗಳಿಸಿದ್ದರೂ, ಅಧಿಕಾರ ಹಿಡಿಯಲು ಕಸರತ್ತು ಮಾಡಬೇಕಾಗಿದೆ. ಕಳೆದ ಅವಧಿಯಲ್ಲಿ 9 ಸ್ಥಾನ ಗಳಿಸಿದ್ದು ಪಕ್ಷೇತರ ಅಭ್ಯರ್ಥಿಯೊಬ್ಬರ ಬೆಂಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದೀಗ 8 ಸ್ಥಾನಗಳೊಂದಿಗೆ ಶಾಸಕರ ಹಾಗೂ ಸಂಸದರ 2 ಮತ ಪಡೆದು ಒಟ್ಟು 10 ಮತಗಳಿಸಬಹುದಾದರೂ ಅಧಿಕಾರ ಪಡೆಯಲು ಕಷ್ಟ ಸಾಧ್ಯವಾಗಿದೆ. ಏಕೆಂದರೆ, ಈಗಾಗಲೇ ಕಾಂಗ್ರೆಸ್ (6) ಹಾಗೂ ಜೆ.ಡಿ.ಎಸ್. (1) ಪೂರ್ವ ಮೈತ್ರಿಯಂತೆ ಒಟ್ಟು 7 ಸ್ಥಾನ ಗಳಿಸಿವೆ. ಅಲ್ಲದೆ, ಬಿ.ಜೆ.ಪಿ. ಬಂಡಾಯ ಅಭ್ಯರ್ಥಿಯೂ ಸೇರಿದಂತೆ 3 ಮಂದಿ ಪಕ್ಷೇತರರಿದ್ದು, ಇವರುಗಳು ಮೈತ್ರಿಕೂಟಕ್ಕೆ ಬೆಂಬಲ ನೀಡಿದರೆ ಮೈತ್ರಿಕೂಟದ ಬಲ ಒಟ್ಟು 10 ಸ್ಥಾನ ತಲಪುತ್ತದೆ. ಎರಡೂ ಕಡೆ ತಲಾ 10 ಮತಗಳು ಬಿದ್ದರೆ ಪಟ್ಟಣ ಪಂಚಾಯಿತಿ ಆಡಳಿತ ಅತಂತ್ರವೆನಿಸಲಿದೆ. ಓರ್ವ ಪಕ್ಷೇತರ ಸದಸ್ಯ ಬಿಜೆಪಿಯತ್ತ ವಾಲಿದರೂ ಪರಿಸ್ಥಿತಿ ಬದಲಾಗಲಿದ್ದು, ಬಿ.ಜೆ.ಪಿ. ಪಾಲಿಗೆ ಆಡಳಿತ ಲಭ್ಯವಾಗಬಹುದು. ಈ 1 ಸ್ಥಾನ ನಿರ್ಣಾಯಕವಾಗಬಲ್ಲುದು.