ಸೋಮವಾರಪೇಟೆ, ಅ. 31: ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ವೀರಾಜಪೇಟೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕುಶಾಲನಗರದಲ್ಲಿ ಅತಂತ್ರ ಸನ್ನಿವೇಶ ನಿರ್ಮಾಣವಾಗಿದೆ. ಸೋಮವಾರಪೇಟೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿದೆ.

ಮೂರೂ ಪಂಚಾಯಿತಿ ಚುನಾವಣೆಯನ್ನು ಅಭ್ಯರ್ಥಿಗಳೊಂದಿಗೆ ಕಾರ್ಯಕರ್ತರು ಹಾಗೂ ಶಾಸಕರುಗಳು ಗಂಭೀರವಾಗಿ ಪರಿಗಣಿಸಿದ್ದು, ಫಲಿತಾಂಶದಿಂದ ಕೆಲವರಿಗೆ ನಿರಾಸೆಯಾಗಿದ್ದರೆ, ಉಳಿದವರಿಗೆ ಸಮಾಧಾನ ತಂದಿದೆ.

ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ 45 ವಾರ್ಡ್‍ಗಳಿದ್ದು, ಇದರಲ್ಲಿ ಬಿಜೆಪಿ 17, ಕಾಂಗ್ರೆಸ್ 16 ಮತ್ತು ಜೆಡಿಎಸ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರರು 4 ವಾರ್ಡ್‍ಗಳಲ್ಲಿ ಜಯಗಳಿಸಿದ್ದಾರೆ.

ಕಾಂಗ್ರೆಸ್ ಮುಕ್ತ ಕೊಡಗು ಹೇಳಿಕೆಗೆ ಉತ್ತರ-ವೀಣಾ ಅಚ್ಚಯ್ಯ: ಜಿಲ್ಲೆಯ 3 ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಗಮನಿಸಿದರೆ, ಬಿಜೆಪಿಯವರ ಕಾಂಗ್ರೆಸ್ ಮುಕ್ತ ಕೊಡಗು ಹೇಳಿಕೆಗೆ ತಕ್ಕ ಉತ್ತರ ಲಭಿಸಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದ್ದಾರೆ.

ಈ ಹಿಂದಿನ ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‍ನ ಜನಪರ ಆಡಳಿತಕ್ಕೆ ಜನತೆ ಮನ್ನಣೆ ನೀಡಿದ್ದಾರೆ. ಕೆಲವು ವಾರ್ಡ್‍ಗಳಲ್ಲಿ ಕಡಿಮೆ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ರಾಜ್ಯದಲ್ಲಿನ ಮೈತ್ರಿ ಸರ್ಕಾರದಂತೆ ಸ್ಥಳೀಯ ಪ.ಪಂ.ಗಳಲ್ಲೂ ಹೊಂದಾಣಿಕೆಯಿಂದ ಆಡಳಿತ ನೀಡುವ ವಿಶ್ವಾಸವಿದೆ. ಜನಪರ ಆಡಳಿತಕ್ಕೆ ಒತ್ತು ನೀಡಲಾಗುವದು ಎಂದು ವೀಣಾ ಅಚ್ಚಯ್ಯ ಅಭಿಪ್ರಾಯಿಸಿದ್ದಾರೆ.

ವಿರೋಧ ಪಕ್ಷವಾಗಿ ಕಾರ್ಯ-ರಂಜನ್: ಸೋಮವಾರಪೇಟೆ ಮತ್ತು ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲದ ಕಾರಣ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಾಗುವದು. ಸೋಮವಾರಪೇಟೆ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ ಮತದಾರರಿಗೆ ಸಮಾಧಾನ ತಂದಿಲ್ಲ ಎಂಬದು ಫಲಿತಾಂಶದಿಂದ ಮನದಟ್ಟಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಸೋಮವಾರಪೇಟೆಯಲ್ಲಿ ಬಿಜೆಪಿಯಿಂದ ಟಿಕೇಟ್ ಕೇಳಿದ್ದ ಮೂವರು ಇತರ ಪಕ್ಷ, ಪಕ್ಷೇತರರಾಗಿ ಗೆದ್ದಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಿಜೆಪಿ ಗೆಲುವಿಗೆ ಅಡ್ಡಿಯಾಗಿದೆ. ಬಂಡಾಯದ ಬಿಸಿಯೂ ಫಲಿತಾಂಶಕ್ಕೆ ತಟ್ಟಿದೆ. ಕುಶಾಲನಗರದಲ್ಲಿ ಕಳೆದ ಬಾರಿ 5 ಸ್ಥಾನ ಗಳಿಸಿದ್ದು, ಈ ಬಾರಿ 6 ಸ್ಥಾನ ಗಳಿಸಿದ್ದೇವೆ. ಕಳೆದ ಸಾಲಿನಲ್ಲಿ ಜೆಡಿಎಸ್‍ನೊಂದಿಗೆ ಹೊಂದಾಣಿಕೆಯಿಂದ ಆಡಳಿತ ನಡೆಸಿದ್ದೇವೆ. ಈ ಬಾರಿ ಕಾಂಗ್ರೆಸ್-ಜೆಡಿಎಸ್‍ನವರೇ ಆಡಳಿತ ನಡೆಸಲಿ. ಎರಡೂ ಪ.ಪಂ.ಗಳಲ್ಲಿ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದ್ದಾರೆ.

ಪಟ್ಟಣ ಪಂಚಾಯಿತಿಗಳ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಮೇಲೆ ಜನರು ಒಲವು ತೋರುವದು ಸರ್ವೆ ಸಾಮಾನ್ಯ. ಈ ಹಿನ್ನೆಲೆಯಲ್ಲಿ ಫಲಿತಾಂಶದಲ್ಲಿ ಅಲ್ಪ ಹಿನ್ನಡೆ ಉಂಟಾಗಿದೆ. ಆದರೂ ಬಹುದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದ್ದು, ಜನಪರ ಕೆಲಸಗಳಿಗೆ ಒತ್ತು ನೀಡಲಿದೆ ಎಮದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

‘ರಾಜ್ಯದ ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಸರಕಾರದ ಸಾಧನೆಗಳಿಗೆ ಜಿಲ್ಲೆಯ ಜನತೆ ಸಂಪೂರ್ಣ ಒಲವು ತೋರಿದ್ದಾರೆ ಎಂಬದು ಮೂರು ಪಟ್ಟಣ ಪಂಚಾಯ್ತಿಗಳ ಚುನಾವಣಾ ಫಲಿತಾಂಶ ಪ್ರತಿಬಿಂಬಿಸುತ್ತಿದೆ. ವಿರಾಜಪೇಟೆಯಲ್ಲಿ ಕಳೆದ ಬಾರಿ ಎರಡು ಸ್ಥಾನಗಳಿದ್ದ ಪಕ್ಷ ಈ ಸಲ ಆರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಮಾತ್ರವಲ್ಲ, ಜೆ.ಡಿ.ಎಸ್.ನ ಏಕೈಕ ಸದಸ್ಯ ಹಾಗೂ ಪಕ್ಷೇತರರ ಬೆಂಬಲದಿಂದ ಅಧಿಕಾರಕ್ಕೆ ಬರುತ್ತೇವೆ. ಒಟ್ಟಿನಲ್ಲಿ ಚುನಾವಣಾ ಫಲಿತಾಂಶ ವೈಯಕ್ತಿಕವಾಗಿ ತೃಪ್ತಿಯನ್ನು ಉಂಟುಮಾಡಿದೆ’

-ಮುಕ್ಕಾಟಿರ ಶಿವು ಮಾದಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

‘ಕೇಂದ್ರದ ಬಿ.ಜೆ.ಪಿ.ಸರಕಾರದ ಜನಪರ ಅಭಿವೃದ್ಧಿ ಕೆಲಸಗಳಿಗೆ ಜನತೆಯ ಅಂಗೀಕಾರವಿದೆಯೆಂಬದು ಚುನಾವಣಾ ಫಲಿತಾಂಶದಿಂದ ತಿಳಿದುಬಂದಿದೆ. ಶಾಸಕರ ಮತ್ತು ಸಂಸದರ ಬೆಂಬಲದೊಂದಿಗೆ ವೀರಾಜಪೇಟೆ ಪಟ್ಟಣ ಪಂಚಾಯ್ತಿಯ ಅಧಿಕಾರವನ್ನು ತಮ್ಮ ಪಕ್ಷವು ಮರಳಿ ಪಡೆಯುವ ನಿಟ್ಟಿನಲ್ಲಿ ಯತ್ನಿಸುತ್ತದೆ. ಪಕ್ಷದ ಸಾಧನೆ ತಮಗೆ ಸಂತೃಪ್ತಿಯನ್ನು ಉಂಟುಮಾಡಿದೆ’

-ಪಟ್ಟಡ ರೀನಾ ಪ್ರಕಾಶ್, ಉಪಾಧ್ಯಕ್ಷೆ ಭಾರತೀಯ ಕಾಫೀ ಮಂಡಳಿ

‘ಚುನಾವಣಾ ಪ್ರಕ್ರಿಯೆ ಪ್ರಾರಂಭದಿಂದಲೂ ತಮ್ಮ ಪಕ್ಷದ ಉಮೇದುವಾರರು ಬಹಳ ಮುಂದೆ ಇದ್ದರು. ಆದರೂ ಸಣ್ಣ ಪುಟ್ಟ ಪಕ್ಷಗಳ ಅಚಾತುರ್ಯದಿಂದ ಒಂದೆರಡು ಸ್ಥಾನಗಳು ಕೈ ತಪ್ಪಿರುವದರಲ್ಲಿ ಬೇಸರವಿದೆ. ಹಿಂದೆಂದಿಗಿಂತಲೂ ಜಾತ್ಯಾತೀತ ಮತಗಳು ಒಗ್ಗಟ್ಟಾಗಿರುವದು ಉತ್ತಮ ಬೆಳವಣಿಗೆ ಎಂದು ಭಾವಿಸುತ್ತೇನೆ. ಮುಂದೆಯೂ ಸರಕಾರದ ನೆರವಿನಿಂದ ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್ ಯತ್ನಿಸುತ್ತದೆ. ಪಕ್ಷೇತರರ ನೆರವಿನ ಬಗ್ಗೆ ನಿರೀಕ್ಷೆಯಿದೆ’

-ಆರ್.ಕೆ. ಅಬ್ದುಸ್ಸಲಾಂ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

‘ಅಲ್ಪಸಂಖ್ಯಾತರು ಅತಿಹೆಚ್ಚಿರುವ ವಾರ್ಡ್‍ನಲ್ಲಿ ಜನರು ನನಗೆ ನೀಡಿದ ಬೆಂಬಲಕ್ಕೆ ಚಿರಋಣಿಯಾಗಿದ್ದೇನೆ ಮತದಾರರು ಜಾತಿ-ಮತ ಬೇದ ಮರೆತು ತನಗೆ ಬೆಂಬಲ ನೀಡಿರುವದು ಸಂತಸ ಉಂಟುಮಾಡಿದೆ. ನನ್ನ ಗೆಲವು ಸೌಹಾರ್ದಕ್ಕೆ ಸಿಕ್ಕಿರುವ ಜನಾಭಿಪ್ರಾಯವೆಂದು ಭಾವಿಸುತ್ತೇನೆ. ತಾನು ಅಧ್ಯಕ್ಷೆಯಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ಈ ಚುನಾವಣೆಯಲ್ಲಿ ತನ್ನ ನೆರವಿಗೆ ಬಂದಿದೆ.’

-ಎಂ.ಕೆ. ದೇಚಮ್ಮ, ಮಾಜೀ ಅಧ್ಯಕ್ಷೆ ಹಾಗೂ ಪಕ್ಷೇತರ ವಿಜೇತ ಅಭ್ಯರ್ಥಿ ವಾರ್ಡ್ ನಂ.7

‘ವೀರಾಜಪೇಟೆ ಜನತೆ ಈ ಹಿಂದಿನಂತೆ ಬಿ.ಜೆ.ಪಿ.ಪಕ್ಷದ ಆಡಳಿತಕ್ಕೆ ಬೆಂಬಲ ನೀಡಿರುವದು ಸಂತಸ ಉಂಟುಮಾಡಿದೆ. ಮುಂದೆಯೂ ಶಾಸಕರ ನೆರವಿನಿಂದ ನಗರದ ಅಭಿವೃದ್ಧಿಗೆ ಯತ್ನಿಸಲಾಗುವದು’

-ಪಟ್ರಪಂಡ ರಘು ನಾಣಯ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ