ಮಡಿಕೇರಿ, ಅ. 31: ಬ್ರಿಟಿಷ್ ಶಾಹಿತ್ವದ ವಿರುದ್ಧ 1937ರಲ್ಲಿ ಧಂಗೆ ಏಳುವದರೊಂದಿಗೆ ಅ. 31ರಂದು ಇಲ್ಲಿನ ಕೋಟೆ ಆವರಣದಲ್ಲಿ ಗಲ್ಲಿಗೇರಿಸುವ ಮುಖಾಂತರ ಹುತಾತ್ಮ ರಾದ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡ ಸಹಿತ, ಯಾರೇ ರಾಷ್ಟ್ರ ಪುರುಷರ ಹಿರಿಮೆಯನ್ನು ಪ್ರತಿಮೆಗಳ ಸ್ಥಾಪನೆ ಹಾಗೂ ಜಾತಿಗಳಿಂದ ಬಂಧಿಸದಿ ರೋಣ ಎಂದು ಪ್ರಮುಖರು ಆಶಿಸಿದರು. ಗುಡ್ಡೆಮನೆ ಸುಬೇದಾರ್ ಅಪ್ಪಯ್ಯ ಗೌಡ ಪ್ರತಿಮೆ ಉಸ್ತುವಾರಿ ಸಮಿತಿ ಹಾಗೂ ಗೌಡ ಸಮಾಜಗಳು ಮತ್ತು ಕನ್ನಡ ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಇಂದು ಜರುಗಿದ ಅಪ್ಪಯ್ಯಗೌಡ ಅವರ 181ನೇ ಬಲಿದಾನ ದಿನ ಸಂದರ್ಭ ಏರ್ಪಡಿಸಿದ ಸಮಾರಂಭದಲ್ಲಿ ಈ ಆಶಯ ವ್ಯಕ್ತವಾಯಿತು.ಆಂತರ್ಯದೊಳಗೆ ಪ್ರತಿಮೆಯಾಗಲಿ : ಹಿರಿಯ ವಕೀಲ ಕೆ.ಪಿ. ಬಾಲಸುಬ್ರಮಣ್ಯ ಅವರು ಕೋಟೆ ಆವರಣದಲ್ಲಿ ಜರುಗಿದ ಕಾರ್ಯ ಕ್ರಮದಲ್ಲಿ ಮುಖ್ಯ ಭಾಷಣ ಮಾಡುತ್ತಾ, ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ತ್ಯಾಗ ಬಲಿದಾನದ ಹಿರಿಮೆ ಯನ್ನು ಪ್ರತಿಯೊಬ್ಬರು ಸ್ಮರಿಸುತ್ತಾ, ಕೇವಲ ಪ್ರತಿಮೆ ಸ್ಥಾಪನೆ ಮೂಲಕ ಆಚರಣೆಗೆ ಸೀಮಿತ ಗೊಳಿಸದೆ, ಅಂತಃಕರಣ ಪೂರ್ವಕ ಸಂಸ್ಮರಣೆ ಗೈಯ್ಯಬೇಕೆಂದು ಕರೆ ನೀಡಿದರು. ಅಂಥ ತ್ಯಾಗ, ಬಲಿದಾನ ಗಳನ್ನು ಎಲ್ಲರು ಒಗ್ಗೂಡಿ ಸ್ಮರಿಸುವ ಕಾರ್ಯ ಕ್ರಮವಾಗಬೇಕೆಂದು ಅವರು ಮಾರ್ನುಡಿದರು.

ಗುಡ್ಡೆಮನೆ ಅಪ್ಪಯ್ಯ ಗೌಡ ಅವರಂತಹ ಹುತಾತ್ಮರನ್ನು ಜಾತಿ, ಭಾಷೆಗಳನ್ನು ಮೀರಿ ನೋಡಬೇಕೆಂದ ಕೆ.ಪಿ. ಬಾಲಸುಬ್ರಮಣ್ಯ, ಯುವ ಪೀಳಿಗೆಗೆ ಅವರ ತ್ಯಾಗÀ, ಶೌರ್ಯ ಸ್ಫೂರ್ತಿ ಯಾಗಬೇಕೆಂದು (ಮೊದಲ ಪುಟದಿಂದ) ನೆನಪಿಸುತ್ತಾ, ತಾವೇ ರಚಿಸಿರುವ ಕವನ ವಾಚಿಸುತ್ತಾ, ಇಂಥ ಚೇತನಗಳು ಮತ್ತೆ ಮತ್ತೆ ಹುಟ್ಟಿ ಬರಲೆಂದು ಆಶಿಸಿದರು.

ಅರ್ಥಪೂರ್ಣ ಆಚರಣೆಗೆ ಕರೆ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಮಾತನಾಡಿ, ಹಿರಿಯರ ಆಶಯದಂತೆ ಗುಡ್ಡೆಮನೆ ಅಪ್ಪಯ್ಯ ಗೌಡ ಸಂಸ್ಮರಣೆ ವೇಳೆ ಮಕ್ಕಳಿಗೆ ಅವರ ಬಗ್ಗೆ ಸ್ಪರ್ಧೆಗಳೊಂದಿಗೆ ವಿವಿಧ ಚಟುವಟಿಕೆ ಆಯೋಜಿಸಿ ಅರ್ಥಪೂರ್ಣ ಆಚರಣೆಗೆ ಮುಂದಾಗುವಂತೆ ಕರೆ ನೀಡಿದರು.

ಅಲ್ಲದೆ ಸರಕಾರವು ದಿನದರ್ಶಿಗಳಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡ ಸಂಸ್ಮರಣಾ ದಿನ ಮುದ್ರಿಸುವಂತಾಗಬೇಕೆಂದು ಆಶಿಸಿದ್ದನ್ನು ಉಲ್ಲೇಖಿಸಿ, ಆ ಬಗ್ಗೆ ಸರಕಾರಕ್ಕೆ ಸಂಬಂಧಪಟ್ಟ ಪ್ರಮುಖರು ಮನವಿ ಸಲ್ಲಿಸುವಂತೆ ಸಲಹೆ ನೀಡಿದರು. ಮಕ್ಕಳಿಗೆ ಪಠ್ಯ ರಚಿಸಲು ಪ್ರಯತ್ನಿಸುವಂತೆ ತಿಳಿ ಹೇಳಿದರು.

ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಯೊಂದಿಗೆ ಸ್ಮಾರಕ ಸ್ಥಳ ಸ್ಥಾಪಿಸಲು ಸಾಧ್ಯವಾಯಿತೆಂದು ನೆನಪಿಸುತ್ತಾ, ಮಹಾಪುರುಷರ ಆಚರಣೆ ವೇಳೆ ಮಕ್ಕಳನ್ನು ತೊಡಗಿಸುವಂತೆ ಸಲಹೆಯಿತ್ತರು.

ಎಲ್ಲರ ಸ್ಮರಿಸೋಣ : ಗುಡ್ಡೆಮನೆ ಅಪ್ಪಯ್ಯಗೌಡ ಅವರ ತ್ಯಾಗ, ಬಲಿದಾನದೊಂದಿಗೆ, ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ವಿವಿಧ ಜನಾಂಗದವರು ಕೈಜೋಡಿಸಿದ್ದು, ಅಂಥ ಎಲ್ಲರನ್ನು ಜಾತ್ಯತೀತ ನೆಲೆಯಲ್ಲಿ ಗೌರವಿಸಬೇಕೆಂದು ವಕೀಲ ಯಾಲದಾಳು ಮನೋಜ್ ಬೋಪಯ್ಯ ಕರೆ ನೀಡಿದರು. ಸಂವಿಧಾನಬದ್ಧ ಹಕ್ಕುಗಳಲ್ಲಿ ನಮ್ಮ ಪೂರ್ವಜರನ್ನು, ರಾಷ್ಟ್ರಪುರುಷರನ್ನು ಸ್ಮರಿಸುವಂತೆ ಅವಕಾಶ ಕಲ್ಪಿಸಿದ್ದು, ಈ ಅರಿವು ಪ್ರತಿಯೊಬ್ಬರಿಗೆ ಇರಬೇಕೆಂದು ಗಮನ ಸೆಳೆದರು. ಭವಿಷ್ಯದಲ್ಲಿ ಸರಕಾರ ಅಪ್ಪಯ್ಯಗೌಡರ ಬಲಿದಾನ ದಿನವನ್ನು ದಿನದರ್ಶಿಯಲ್ಲಿ ಮುದ್ರಿಸುವಂತೆ ಆಗ್ರಹಿಸಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಅಪ್ಪಯ್ಯಗೌಡ ಸಹಿತ ಅವರೊಂದಿಗೆ ಹೋರಾಡಿದ ಎಲ್ಲ ಜನಾಂಗದ ಹುತಾತ್ಮರನ್ನು ಸಮಾನ ಗೌರವದಿಂದ ಕಾಣಬೇಕೆಂದು ಆಶಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ಸ್ಮಾರಕ ನಿರ್ವಹಣೆ ಸಮಿತಿ ಅಧ್ಯಕ್ಷ ತುಂತಜೆ ಗಣೇಶ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಮೆ - ಬಲಿದಾನ ಸ್ಥಳಗಳಲ್ಲಿ ನಮನ : ಆ ಮುನ್ನ ಸುದರ್ಶನ ವೃತ್ತದ ಬಳಿಯ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ ಗುಡ್ಡೆಮನೆ ಅಪ್ಪಯ್ಯ ಗೌಡ ಪ್ರತಿಮೆಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್‍ಡಿ.ಪಿ., ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸೇರಿದಂತೆ ಮಡಿಕೇರಿ ಹಾಗೂ ಇತರೆಡೆಗಳ ಗೌಡ ಸಮಾಜಗಳ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಸಹಿತ ಇತರ ಗಣ್ಯರು ಪುಷ್ಪಾರ್ಚನೆ ಯೊಂದಿಗೆ ಗೌರವ ನಮನ ಸಲ್ಲಿಸಿದರು. ಕೋಟೆ ಆವರಣದಲ್ಲಿ 1837 ಅಕ್ಟೋಬರ್ 31ರಂದು ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ನೇಣಿಗೇರಿಸಿದ ಸ್ಥಳದಲ್ಲೂ ಗೌರವ ನಮನ ಸಲ್ಲಿಸಲಾಯಿತು.

ಸಂಘ ಸಂಸ್ಥೆಗಳ ಪ್ರಮುಖರಾದ ಹೊಸೂರು ರಮೇಶ್ ಜೋಯಪ್ಪ, ಪೇರಿಯನ ಜಯಾನಂದ, ದಂಬೆಕೋಡಿ ಆನಂದ, ತೋಟಂಬೈಲು ಮನೋಹರ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ, ಯಂಕನ ಉಲ್ಲಾಸ್, ಬೈತಡ್ಕ ಜಾನಕಿ ಬೆಳ್ಯಪ್ಪ, ಅಂಬೆಕಲ್ ಕುಶಾಲಪ್ಪ, ನವೀನ್ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು. ಸರಕಾರಿ ಪ್ರಾಥಮಿಕ ಶಾಲೆ, ಲಿಟ್‍ಫ್ಲವರ್ ಶಾಲಾ ಮಕ್ಕಳು ಅಪ್ಪಯ್ಯಗೌಡ ಹಾಗೂ ಇತರ ರಾಷ್ಟ್ರ ಪುರುಷರ ಕುರಿತು ದೇಶಭಕ್ತಿ ಗೀತೆ ಹಾಡಿದರು. ಸಮಿತಿ ಕಾರ್ಯದರ್ಶಿ ಎ.ಕೆ. ಪಾಲಾಕ್ಷ ಸ್ವಾಗತಿಸಿದರೆ, ಪ್ರೇಮಾ ಹಾಗೂ ರುಕ್ಮಿಣಿ ಲಾವಣಿ ಪದ ಹಾಡಿದರು. ಪಟ್ಟಡ ಶಿವಕುಮಾರ್ ನಿರೂಪಿಸಿ, ವಂದಿಸಿದರು.