ಸೋಮವಾರಪೇಟೆ, ಅ. 31: ತಾಲೂಕಿನ ಕುಶಾಲನಗರ ಮತ್ತು ಸೋಮವಾರಪೇಟೆ ಪ.ಪಂ.ಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಇಲ್ಲಿನ ಜೂನಿಯರ್ ಕಾಲೇಜಿನ ಕೊಠಡಿಯಲ್ಲಿ ಯಾವದೇ ಗೊಂದಲಗಳಿಲ್ಲದಂತೆ ನಡೆಯಿತು.

7.45ಕ್ಕೆ ಭದ್ರತಾ ಕೊಠಡಿಯಿಂದ ಮತಯಂತ್ರಗಳನ್ನು ಎಣಿಕಾ ಕೇಂದ್ರಕ್ಕೆ ತರಲಾಯಿತು. 8 ಗಂಟೆಯಿಂದ ಮತ ಎಣಿಕೆ ಪ್ರಾರಂಭಗೊಂಡು 9.30ಕ್ಕೆ ಮುಕ್ತಾಯಗೊಂಡಿತು. ಮತ ಎಣಿಕಾ ಕೇಂದ್ರದೊಳಗೆ ಅಭ್ಯರ್ಥಿ ಅಥವಾ ಏಜೆಂಟ್‍ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಚುನಾವಣಾಧಿಕಾರಿಯಾಗಿರುವ ತಾಲೂಕು ತಹಶೀಲ್ದಾರ್ ಮಹೇಶ್ ಅವರು ಮತ ಎಣಿಕಾ ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದರು. ವೀಕ್ಷಕರಾಗಿ ಮೈಸೂರಿನ ಅಡಿಷನಲ್ ರೀಜನಲ್ ಕಮಿಷನರ್ ರೂಪಾ, ಸಹಾಯಕರಾಗಿ ಮೂಡಾದ ಅಧಿಕಾರಿ ಸೌಮ್ಯ ಅವರುಗಳು ಆಗಮಿಸಿದ್ದರು. ಡಿವೈಎಸ್‍ಪಿ ಮುರಳೀಧರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.