ಸಿದ್ದಾಪುರ, ಅ. 31: ವ್ಯಾಪಾರದ ಪರವಾನಗಿ ಪಡೆಯದೆ ಮಾಂಸ ಮಾರಾಟ ಮಾಡುತ್ತಿದ್ದ 2 ಮಳಿಗೆಗಳಿಗೆ ಪಂಚಾಯಿತಿ ಆಡಳಿತ ಮಂಡಳಿ ಬೀಗ ಜಡಿದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪಟ್ಟಣದಲ್ಲಿ ಪಂಚಾಯಿತಿಯ ಯಾವದೇ ಪರವಾನಿಗೆಯನ್ನು ಪಡೆಯದೆ ಅನಧಿಕೃತವಾಗಿ ಕೋಳಿ ಮಾಂಸ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರ ಮಳಿಗೆಗಳಿಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿ ತೆರಳಿ ಬೀಗ ಜಡಿದರು.

ಈ ಸಂದರ್ಭ ಮಾಂಸ ಮಾರಾಟಗಾರರ ಹಾಗೂ ಪಂಚಾಯಿತಿ ಆಡಳಿತ ಮಂಡಳಿಯ ನಡುವೆ ಮಾತಿನ ಚಕಮಕಿ ನಡೆಯಿತು. ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಹಾಜರಿದ್ದರು.