ಮಡಿಕೇರಿ, ಅ. 31: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡುವಿನಲ್ಲಿ ಸ್ಮಶಾನ ಜಾಗಕ್ಕಾಗಿ ಶವ ಇಟ್ಟು ಕೆಲವರು ಪ್ರತಿಭಟನೆ ನಡೆಸಿದರು. ಸ್ಮಶಾನ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಮುಂದಾಗಿರುವದರ ವಿರುದ್ಧ ಸೋಮವಾರ ಸಾವನ್ನಪ್ಪಿದ ಗ್ರಾಮದ ಗಣೇಶ್ (67) ಎಂಬವರ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು. ಇಲ್ಲಿನ ಜನರ ಅಂತ್ಯ ಸಂಸ್ಕಾರಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ಈ ಹಿಂದಿನಿಂದಲೂ ಸಾವನ್ನಪ್ಪಿದವರನ್ನು ದಫನ ಮಾಡುತ್ತಾ ಬರುತ್ತಿದ್ದು, ವರ್ಷಗಳ ಹಿಂದೆ ಸ್ಮಶಾನ ಜಾಗವನ್ನು ಒಳಗೊಂಡ ಪ್ರದೇಶವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸ್ಟೇಡಿಯಂ ನಿರ್ಮಿಸಲು ಅವಕಾಶ ಮಾಡಿಕೊಟ್ಟಿರುವ ಸರಕಾರದ ಕ್ರಮದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಜವರೇಗೌಡ ಪ್ರತಿಭಟನಾ ನಿರತದೊಂದಿಗೆ ಮಾತನಾಡಿ, ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಶವವನ್ನು ದಫನ ಮಾಡಲಾಯಿತು. ಎಸ್.ಡಿ.ಪಿ.ಐ. ಪಕ್ಷದ ರಾಜ್ಯ ಸಮಿತಿ ಸದಸ್ಯ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ಅಮೀನ್ ಮೊಹಿಸಿನ್, ಕಾರ್ಮಿಕ ಮುಖಂಡ ಮೊಣ್ಣಪ್ಪ, ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ, ಬಿ.ಎಸ್.ಪಿ. ಅಧ್ಯಕ್ಷ ಮೋಹನ್ ಮೌರ್ಯ, ವೀರಾಜಪೇಟೆ ಅಧ್ಯಕ್ಷ ಮುಸ್ತಫ, ಬಶೀರ್, ಮಹೇಶ್ ಸೇರಿದಂತೆ ಇತರರು ಇದ್ದರು.