ಮಡಿಕೇರಿ, ಅ. 31: ಪೊನ್ನಂಪೇಟೆಯಲ್ಲಿರುವ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿದ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ಪ್ರಸ್ತುತ ಕ್ರೀಡಾ ವಸತಿಯನ್ನು ಸಮರ್ಪಕವಾಗಿ ಸಜ್ಜುಗೊಳಿಸಲಾಗುತ್ತಿದೆ. ಆದರೆ ಪೋಷಕರಿಂದ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಆತಂಕ ಕೇಳಿ ಬಂದಿರುವದರಿಂದ ವೈದ್ಯಕೀಯ ತಪಾಸಣೆಗೆ ಕ್ರಮಕೈಗೊಳ್ಳಲಾಗಿದೆ ಎಂದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ದುರ್ಗಿಹಳ್ಳಿ ಅವರು ಇಲಾಖೆಯಿಂದ ಅಗತ್ಯ ನೆರವು ನೀಡುವ ಭರವಸೆಯಿತ್ತರು. ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ತಾ.ಪಂ. ಅಧ್ಯಕ್ಷೆ ಸ್ಮಿತಾಪ್ರಕಾಶ್, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೆರ ಸುಮಿತ, ಕ್ರೀಡಾಶಾಲೆಯ ತರಬೇತುದಾರರಾದ ಬುಟ್ಟಿಯಂಡ ಚಂಗಪ್ಪ, ಕುಪ್ಪಂಡ ಸುಬ್ಬಯ್ಯ, ವಸತಿ ಶಾಲೆಯ ಮೇಲ್ವಿಚಾರಕರಾದ ಸುರೇಶ್ ಪ್ರೀತ ಮತ್ತಿತರರು ಹಾಜರಿದ್ದರು. ಕ್ರೀಡಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರತಿ ಹದಿನೈದು ದಿನಕ್ಕೊಮ್ಮೆ ವೈದ್ಯಕೀಯ ತಪಾಸಣೆಗೆ ಕ್ರಮಕೈಗೊಳ್ಳಲು ಈ ಸಂದರ್ಭ ಪ್ರಮುಖರು ಸೂಚಿಸಿದರು.