ಮಡಿಕೇರಿ, ಅ. 31: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ನ. 2 ರಂದು ಮಡಿಕೇರಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಗೆ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜವು ಬೆಂಬಲ ವ್ಯಕ್ತಪಡಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಮೊಗೇರ ಸೇವಾ ಸಮಾಜದ ಗೌರವಾಧ್ಯಕ್ಷ ಪಿ.ಎಂ. ರವಿ ಹಾಗೂ ಜಿಲ್ಲಾಧ್ಯಕ್ಷ ಬಿ. ಶಿವಪ್ಪ, ಶ್ರೀ ಅಯ್ಯಪ್ಪ ಸ್ವಾಮಿ ಸಂರಕ್ಷಣಾ ಸಮಿತಿ ಮತ್ತು ಮುತ್ತಪ್ಪ ದೇವಾಲಯದ ಸಮಿತಿಯಿಂದ ನ. 2 ರಂದು ಮಡಿಕೇರಿಯಲ್ಲಿ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಮೊಗೇರ ಸಮಾಜ ಕೂಡ ಪಾಲ್ಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಶಬರಿಮಲೆ ಕ್ಷೇತ್ರ ತನ್ನದೇ ಆದ ಆಚಾರ, ವಿಚಾರ ಪದ್ಧತಿ, ಪರಂಪರೆಯೊಂದಿಗೆ ಧಾರ್ಮಿಕ ಕಟ್ಟುಪಾಡು ಹಾಗೂ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಆದರೆ ನ್ಯಾಯಲಯವು ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನೀಡಿದ್ದು, ಈ ತೀರ್ಪನ್ನು ಮರುಪರಿಶೀಲಿಸಿ ನ್ಯಾಯ ಒದಗಿಸುವ ಅಗತ್ಯವಿದೆ. ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಿ ಕ್ಷೇತ್ರದ ಪಾವಿತ್ರ್ಯತೆ ಮತ್ತು ಕಟ್ಟುಪಾಡನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ರವಿ ಹಾಗೂ ಶಿವಪ್ಪ ಮನವಿ ಮಾಡಿದ್ದಾರೆ.