ಸೋಮವಾರಪೇಟೆ, ಅ. 31: ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ‘ಕೈ’ ಬಲಪಡಿಸಿಕೊಂಡಿದ್ದು, ಜಾತ್ಯತೀತ ಜನತಾದಳದ ‘ತೆನೆ’ ಗಟ್ಟಿಯಾಗಿದ್ದರೆ, ಭಾರತೀಯ ಜನತಾ ಪಕ್ಷದ ‘ಕಮಲ’ ಅಲುಗಿದೆ.ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತ ಲಭಿಸಿದ್ದು, 11 ಸ್ಥಾನಗಳ ಪೈಕಿ 7ರಲ್ಲಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಬಿಜೆಪಿ 3 ವಾರ್ಡ್‍ಗಳಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಿದ್ದು, ಉಳಿದಂತೆ ಒಂದು ವಾರ್ಡ್‍ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವಿನ ನಗೆ ಬೀರಿದ್ದಾರೆ.1ನೇ ವಾರ್ಡ್-(ಬಸವೇಶ್ವರ ಬ್ಲಾಕ್) ಬಿಜೆಪಿಯ ಕೆ.ಜಿ. ಸುರೇಶ್ (169) ಸೋಲನುಭವಿಸಿದ್ದು, ಕಾಂಗ್ರೆಸ್‍ನ ಉದಯಶಂಕರ್ (188) ಗೆಲವು ಸಾಧಿಸಿದ್ದಾರೆ. ಈ ವಾರ್ಡ್‍ನಲ್ಲಿ 3 ನೋಟಾ ಮತಗಳು ಚಲಾವಣೆಯಾಗಿವೆ. 2ನೇ ವಾರ್ಡ್- (ಪವರ್‍ಹೌಸ್ ರಸ್ತೆ) ಬಿಜೆಪಿಯ ಪಿ.ಕೆ. ಚಂದ್ರು (125) ಅವರು ಕಾಂಗ್ರೆಸ್‍ನ ಮಂಜುನಾಥ್ (59) ವಿರುದ್ಧ ಜಯಗಳಿಸಿದ್ದಾರೆ. ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದ ರಘುನಾಥ್ 15 ಮತ ಪಡೆದಿದ್ದು, ನೋಟಾಕ್ಕೆ 4 ಮತ ಚಲಾವಣೆಯಾಗಿದೆ.3ನೇ ವಾರ್ಡ್-(ವೆಂಕಟೇಶ್ವರ ಬ್ಲಾಕ್) ಬಿಜೆಪಿಯ ನಳಿನಿ ಗಣೇಶ್ (219) ಅವರು ಜೆಡಿಎಸ್‍ನ ಕೆ.ಎಂ. ಪುಷ್ಪ (148) ವಿರುದ್ಧ ಭರ್ಜರಿ ಜಯ ಗಳಿಸಿದ್ದು, (ಮೊದಲ ಪುಟದಿಂದ) ಪಕ್ಷೇತರ ಅಭ್ಯರ್ಥಿ ನೀಲಾವತಿ 30 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಗಿದೆ. ಇಲ್ಲಿ 1 ಮತ ನೋಟಾಕ್ಕೆ ಚಲಾವಣೆಯಾಗಿದೆ. 4ನೇ ವಾರ್ಡ್-(ರೇಂಜರ್ ಬ್ಲಾಕ್ 1ನೇ ಹಂತ) ಬಿಜೆಪಿಯ ಎನ್.ಎಸ್. ಮೂರ್ತಿ(156) ವಿರುದ್ಧ ಕಾಂಗ್ರೆಸ್‍ನ ಸಂಜೀವ (195) ಜಯ ಗಳಿಸಿದ್ದು, 3 ಮತಗಳು ನೋಟಾಕ್ಕೆ ಬಿದ್ದಿವೆ. 5ನೇ ವಾರ್ಡ್- (ತ್ಯಾಗರಾಜ ರಸ್ತೆ) ಬಿಜೆಪಿಯ ಬಿ.ಎಂ. ಸುರೇಶ್ (161) ಸೋಲನುಭವಿಸಿದ್ದು, ಕಾಂಗ್ರೆಸ್‍ನ ಬಿ.ಸಿ. ವೆಂಕಟೇಶ್ (204) ಗೆಲವಿನ ನಗೆ ಬೀರಿದ್ದಾರೆ. 4 ಮತಗಳು ನೋಟಾಕ್ಕೆ ಲಭಿಸಿದೆ.

6ನೇ ವಾರ್ಡ್-(ವಿಶ್ವೇಶ್ವರಯ್ಯ ಬ್ಲಾಕ್) ಬಿಜೆಪಿಯಿಂದ ಸ್ಪರ್ಧಿಸಿದ್ದ ಪ.ಪಂ. ಮಾಜೀ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ (151) ಅವರಿಗೆ ಕಾಂಗ್ರೆಸ್‍ನ ಶೀಲಾ ಡಿಸೋಜ (218) ಅವರು ಸೋಲುಣಿಸಿದ್ದಾರೆ. ಈ ವಾರ್ಡ್‍ನಲ್ಲಿ 1 ಮತ ನೋಟಾ ಪಾಲಾಗಿದೆ. 7ನೇ ವಾರ್ಡ್(ರೇಂಜರ್ ಬ್ಲಾಕ್) ಬಿಜೆಪಿಯ ದಾಕ್ಷಾಯಿಣಿ (148) ಅವರು ಜೆಡಿಎಸ್‍ನ ಯುವ ಅಭ್ಯರ್ಥಿ ಜೀವನ್ (206) ವಿರುದ್ಧ ಸೋಲು ಕಂಡಿದ್ದು, 2 ಮತಗಳು ನೋಟಾಕ್ಕೆ ಚಲಾವಣೆಯಾಗಿದೆ.

8ನೇ ವಾರ್ಡ್-(ಜನತಾ ಕಾಲೋನಿ) ಬಿಜೆಪಿಯ ಪ್ರಮೋದ್ (141) ಅವರು ಬಿಜೆಪಿಗೆ ಬಂಡಾಯ ವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶುಭಕರ್ (201) ವಿರುದ್ಧ ಸೋಲನುಭವಿಸಿದ್ದು, ಜೆಡಿಎಸ್ ಅಭ್ಯರ್ಥಿ ವೆಂಕಟೇಶ್ 36 ಮತ ಗಳಿಸಿದ್ದಾರೆ. ಈ ವಾರ್ಡ್‍ನಲ್ಲಿ 3 ಮತ ನೋಟಾಕ್ಕೆ ಸಂದಾಯವಾಗಿದೆ. 9ನೇ ವಾರ್ಡ್-(ಸಿದ್ದಲಿಂಗೇಶ್ವರ ಬ್ಲಾಕ್) ಬಿಜೆಪಿಯ ಅನಿತಾ ಮಂಜುನಾಥ್ (150) ಅವರು ಜೆಡಿಎಸ್‍ನ ನಾಗರತ್ನ (163) ಅವರ ವಿರುದ್ಧ ಸೋಲು ಕಂಡಿದ್ದು, 2 ಮತ ನೋಟಾ ಪಾಲಾಗಿದೆ.

10ನೇ ವಾರ್ಡ್-(ಮಹದೇಶ್ವರ ಬ್ಲಾಕ್) ಬಿಜೆಪಿಯ ದಿವ್ಯಾ ಮೋಹನ್ (248) ಅವರು ಜೆಡಿಎಸ್‍ನ ಜಯಂತಿ ಶಿವಕುಮಾರ್ (288) ವಿರುದ್ಧ ಪರಾಭವಗೊಂಡಿದ್ದು, ಬಿಜೆಪಿ ಟಿಕೇಟ್ ಲಭಿಸದೇ ಪಕ್ಷೇತರ ಅಭ್ಯರ್ಥಿಯಾಗಿದ್ದ ಗೀತಾ ಹರೀಶ್ 125 ಮತ ಗಳಿಸಿದ್ದಾರೆ. 11ನೇ ವಾರ್ಡ್-(ಸಿ.ಕೆ. ಸುಬ್ಬಯ್ಯ ಬ್ಲಾಕ್) ಬಿಜೆಪಿಯ ಬಿ.ಆರ್. ಮಹೇಶ್ (211) ಅವರು ಕಾಂಗ್ರೆಸ್‍ನ ಹಿರಿಯ ಸದಸ್ಯ ಕೆ.ಎ. ಆದಂ (165) ಅವರ ವಿರುದ್ಧ ಗೆಲವಿನ ನಗೆ ಬೀರಿದ್ದಾರೆ. ಈ ವಾರ್ಡ್‍ನಲ್ಲಿ 1 ಮತ ನೋಟಾಕ್ಕೆ ಬಿದ್ದಿದೆ.

ಸ್ಪರ್ಧೆಯಲ್ಲಿದ್ದ ಪಂಚಾಯಿತಿ ಮಾಜೀ ಅಧ್ಯಕ್ಷರುಗಳ ಪೈಕಿ ನಳಿನಿ ಗಣೇಶ್ ಮಾತ್ರ ಗೆಲವು ಸಾಧಿಸಿದ್ದರೆ, ಎನ್.ಎಸ್. ಮೂರ್ತಿ, ವಿಜಯಲಕ್ಷ್ಮೀ ಸುರೇಶ್ ಸೋಲು ಕಂಡಿದ್ದಾರೆ. ಮಾಜೀ ಉಪಾಧ್ಯಕ್ಷೆ ಶೀಲಾ ಡಿಸೋಜ ಗೆಲವಿನ ನಗೆ ಬೀರಿದ್ದರೆ, ಮಾಜೀ ಸದಸ್ಯರುಗಳಾದ ಸಂಜೀವ, ವೆಂಕಟೇಶ್, ಜಯಂತಿ ಶಿವಕುಮಾರ್ ಅವರುಗಳು ಜಯಭೇರಿ ಬಾರಿಸಿದ್ದಾರೆ. ಮಾಜೀ ಸದಸ್ಯರುಗಳಾದ ಕೆ.ಎ. ಆದಂ, ದಾಕ್ಷಾಯಿಣಿ, ಬಿ.ಎಂ. ಸುರೇಶ್ ಅವರುಗಳನ್ನು ಮತದಾರರು ತಿರಸ್ಕರಿಸಿರುವದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.

- ವಿಜಯ್