ಗೋಣಿಕೊಪ್ಪ ವರದಿ, ಅ. 31 : ಮೂರು ದಿನಗಳ ಹಿಂದಷ್ಟೆ ಹಾತೂರು ಗ್ರಾಮದಲ್ಲಿ ಹಸುವನ್ನು ಕೊಂದು ಹಾಕಿದ್ದ ಹುಲಿ ಗ್ರಾಮಸ್ಥರಿಗೆ ಪ್ರತ್ಯಕ್ಷವಾಗುತ್ತಿದ್ದು, ಹೆದ್ದಾರಿ ಮೇಲೆ ಜಿಗಿಯುವ ಮೂಲಕ ಭಯದ ವಾತಾವರಣ ಸೃಷ್ಟಿಸಿದೆ. ಹಗಲು ಹೊತ್ತಿನಲ್ಲಿಯೇ ಮತ್ತೆ ಹಸುವಿನ ಮೇಲೆರಗುವ ಮೂಲಕ ಹಸುವನ್ನು ಘಾಸಿಗೊಳಿಸಿದೆ. ಗ್ರಾಮದಲ್ಲಿ ಜಾನುವಾರು ಗಳನ್ನು ಕಾಪಾಡಿ ಕೊಳ್ಳುವದೇ ಕೃಷಿಕರಿಗೆ ಸವಾಲಾಗಿದೆ.ಹೆದ್ದಾರಿ ಮೇಲೆ ಜಿಗಿದು ಬಂದ ಹುಲಿ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಾತೂರು ಗ್ರಾಮದಿಂದ ಸಮೀಪದ ಕೆ. ಬೈಗೋಡು ಗ್ರಾಮಕ್ಕೆ ಹುಲಿ ಹೆದ್ದಾರಿ ಮೇಲೆ ಜಿಗಿದು ಸೇರಿಕೊಂಡಿತು. ಸ್ಥಳೀಯ ಕಿರಣ್ ಎಂಬವರು

(ಮೊದಲ ಪುಟದಿಂದ) ರಸ್ತೆಯಲ್ಲಿ ಬರುತ್ತಿದ್ದಾಗ ಗೋಣಿಕೊಪ್ಪ- ವೀರಾಜಪೇಟೆ ಹೆದ್ದಾರಿಯ ಹಾತೂರು ಹೊಳೆಯ ಸಮೀಪ ಕಿರಣ್ ಅವರ ಎದುರೇ ಹುಲಿ ರಸ್ತೆ ಮೇಲೆ ಜಿಗಿದು ರಸ್ತೆ ದಾಟಿತು. ಇದನ್ನು ಕಂಡ ಕಿರಣ್ ಭಯದಿಂದ ಓಡಿ ಬಂದು ಅಂಗಡಿಗೆ ಸೇರಿಕೊಂಡಿದ್ದರು. ತನ್ನ ಕಣ್ಣೆದುರೇ ಜಿಗಿದ ಹುಲಿಯನ್ನು ಕಂಡು ಕಿರಣ್ ಭಯಗೊಂಡು ಓಡಿ ಬಂದು 4 ಗ್ಲಾಸ್ ನೀರು ಕುಡಿದು ಭಯ ನೀಗಿಸಿಕೊಂಡರು. ನಡುಗುತ್ತಾ ‘ಹುಲಿ ಜಿಗಿದಿತ್ತು. ನನ್ನ ಮೇಲೆರಗುವ ಭಯದಿಂದ ಓಡಿ ಬಂದೆ’ ಎಂದು ಸ್ಥಳೀಯರೊಂದಿಗೆ ಹೇಳಿಕೊಂಡರು.

ತಪ್ಪಿಸಿಕೊಂಡ ಗರ್ಭಿಣಿ ಹಸು

ಹೆದ್ದಾರಿ ದಾಟಿ ಕೆ. ಬೈಗೋಡು ಗ್ರಾಮಕ್ಕೆ ಸೇರಿಕೊಂಡ ಹುಲಿ ಒಂದು ಗಂಟೆ ಅವಧಿಯಲ್ಲಿ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಗರ್ಭಿಣಿ ಹಸುವಿನ ಮೇಲೆ ಧಾಳಿ ನಡೆಸಿದೆ. ಬೈಗೋಡು ಗ್ರಾಮದ ಪೊನ್ನಚ್ಚನ ಉತ್ತಯ್ಯ ಎಂಬವರಿಗೆ ಸೇರಿದ ಹಸುವನ್ನು ಗದ್ದೆಯಲ್ಲಿ ಮೇಯಲು ಕಟ್ಟಿಹಾಕಲಾಗಿದ್ದ ಸಂದರ್ಭ ಧಾಳಿ ನಡೆಸಿತು. ಹಸು ಹಗ್ಗವನ್ನು ತುಂಡರಿಸಿಕೊಂಡು ಓಡಿ ತಪ್ಪಿಸಿಕೊಂಡಿದೆ. ಹಸುವಿನ ಮುಖ, ಹೊಟ್ಟೆ ಭಾಗಕ್ಕೆ ಪರಚಿದ ಗಾಯವಾಗಿದ್ದು, ಜೀವಾಪಾಯದಿಂದ ಪಾರಾಗಿದೆ. 7 ತಿಂಗಳ ಗರ್ಭಿಣಿ ಹಸು ಹುಲಿಯಿಂದ ತಪ್ಪಿಸಿಕೊಂಡು ಸುಮಾರು 1 ಕಿ.ಮೀ. ದೂರದಷ್ಟು ಓಡಿ ಬಂದಿದೆ. ಇದರಿಂದಾಗಿ ಗರ್ಭಿಣಿ ಹೊಟ್ಟೆಗೆ ಪೆಟ್ಟಾಗಿರುವ ಬಗ್ಗೆ ಉತ್ತಯ್ಯ ಅವರಲ್ಲಿ ಆತಂಕ ಮೂಡಿದೆ. ಗರ್ಭಪಾತವಾದರೆ ಏನು ಗತಿ ಎಂದು ನೋವಿನಿಂದ ನುಡಿಯುತ್ತಾರೆ. ಹಸುವಿನ ಸಮೀಪವೇ ಗೂಳಿಯನ್ನು ಕಟ್ಟಿದ್ದೆ. ಗದ್ದೆಯಲ್ಲಿನ ಹುಲ್ಲಿಗೆ ಕಟ್ಟಿದ್ದರಿಂದ ತುಂಡರಿಸಿಕೊಂಡು ಬರಲು ಸಾಧ್ಯವಾಯಿತು. ರಾತ್ರಿ ಹೇಗೆ ರಕ್ಷಿಸಿಕೊಳ್ಳುವದು ಎಂದು ನೋವಿನಿಂದ ಹೇಳಿದರು.

ಇತ್ತ ಹಾತೂರು ಗ್ರಾಮದ ಕೊಕ್ಕಂಡ ಮಾದಯ್ಯ ಎಂಬವರ ಹಸುವನ್ನು 3 ದಿನಗಳ ಹಿಂದೆಯಷ್ಟೆ ಕೊಂದಿದ್ದ ಜಾಗದಲ್ಲಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ. ಅಲ್ಲಿಗೆ ಹುಲಿ ಬಾರದೇ ಅದರ ಸಮೀಪ 400 ಮೀಟರ್ ದೂರದಲ್ಲಿ ಜನರ ಕಣ್ಣಿಗೆ ಪ್ರತ್ಯಕ್ಷವಾಗಿದೆ. ಬುಧವಾರ ಕೂಂಬಿಂಗ್ ನಡೆಸಿತಾದರೂ ಹುಲಿ ಪತ್ತೆಯಾಗಲಿಲ್ಲ.

ಹಗಲು ಹೊತ್ತಿನಲ್ಲಿ ಧಾಳಿ ನಡೆಸುತ್ತಿರುವದು ಆತಂಕ ಹೆಚ್ಚಾಗಿಸಿದೆ. ಹಾತೂರು ಭಾಗದಲ್ಲಿ ಕೂಂಬಿಂಗ್ ನಡೆಸಿದ್ದು, ಹುಲಿ ಪತ್ತೆಯಾಗಲಿಲ್ಲ. ಜನರಿಗೆ ಜಾನುವಾರುಗಳನ್ನು ಆದಷ್ಟು ಮನೆಯ ಸಮೀಪ ಕಟ್ಟಿಕೊಳ್ಳಲು ತಿಳಿಸಲಾಗಿದೆ. ಹುಲಿಯ ಚಲನವಲನ ಆಧರಿಸಿ ಕಾರ್ಯಾಚರಣೆ ನಡೆಸಲಾಗುವದು ಎಂದು ಪೊನ್ನಂಪೇಟೆ ಆರ್‍ಎಫ್‍ಒ ಗಂಗಾಧರ್ ತಿಳಿಸಿದ್ದಾರೆ.

ವರದಿ -ಸುದ್ದಿಪುತ್ರ