ಗೋಣಿಕೊಪ್ಪ ವರದಿ, ನ. 1: ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗ ದಲ್ಲಿ ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯಲ್ಲಿ ಮೊಬೈಲ್ ಆರೋಗ್ಯ ತಪಾಸಣಾ ಸೇವಾ ಕೇಂದ್ರವನ್ನು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿ, ವಿವಿಧ ವಸತಿ ಶಾಲೆಗಳಿಗೆ ಭೇಟಿ ನೀಡಿದ್ದು ಅಲ್ಲಿಯ ಮಕ್ಕಳಿಗೆ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸಂಚಾರಿ ಆರೋಗ್ಯ ಸೇವೆಯನ್ನು ನಡೆಸಿಕೊಡುವಂತೆ ಜಿಲ್ಲಾ ಆರೋಗ್ಯ ಇಲಾಖೆಯವರನ್ನು ಕೇಳಿಕೊಂಡ ಮೇರೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಉತ್ತಮ ಸ್ಪಂದನೆ ನೀಡಿದ್ದಾರೆ.

ಪ್ರತಿ ತಿಂಗಳು 2 ಬಾರಿ ಕ್ರೀಡಾ ವಸತಿ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡುವ ದಿಸೆಯಲ್ಲಿ ಇದನ್ನು ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜೇಶ್ ಮಾತನಾಡಿ, ಉತ್ತಮವಾದ ಕ್ರೀಡಾಪಟುಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವದು ಬಹುಮುಖ್ಯವಾಗಿದೆ. ಇದರೊಂದಿಗೆ ಸ್ವಚ್ಛತೆಯ ಬಗ್ಗೆ ಮಕ್ಕಳು ಗಮನ ಹರಿಸಬೇಕಾಗಿದೆ. ಇದರೊಂದಿಗೆ ತುರ್ತು ಚಿಕಿತ್ಸೆಗೆ ಮೆಡಿಕಲ್ ಕಿಟ್ ನೀಡಲಾಗುತ್ತದೆ.

ಕೇಂದ್ರ ಸರ್ಕಾರದ ಆಯುಷ್‍ಮಾನ್ ಭಾರತ ಮತ್ತು ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರ ಸದುಪಯೋಗ ವನ್ನು ಪಡಿಸಿಕೊಳ್ಳುವಂತೆ ಕರೆ ನೀಡಿದರು. ಕ್ರೀಡಾ ವಸತಿ ಶಾಲೆಯಲ್ಲಿ ಇರುವ ಮಕ್ಕಳಿಗೆ ಆರೋಗ್ಯ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿ ಮಕ್ಕಳ ಎಲ್ಲ ಆರೋಗ್ಯದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದರು.

ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಸದಸ್ಯೆ ಆಶಾ ಪ್ರಕಾಶ್, ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಸುಮಿತಾ ಗಣೇಶ್, ತಾಲೋಕು ವೈದ್ಯಾಧಿಕಾರಿ ಡಾ. ಯತಿರಾಜ್, ತರಬೇತುದಾರರಾದ ಚೆಂಗಪ್ಪ, ಸುಬ್ಬಯ್ಯ ಹಾಗೂ ವೈದÀ್ಯರುಗಳ ತಂಡ ಉಪಸ್ಥಿತರಿದ್ದರು.