ಗೋಣಿಕೊಪ್ಪ ವರದಿ, ನ. 1: ಮಾರುಕಟ್ಟೆ ವಿಸ್ತರಣೆಗೆ ಪೂರಕವಾಗುವಂತೆ ಹುದೂರು ಗ್ರಾಮದಲ್ಲಿ ಪುತ್ತರಿ ರೈತ ಉತ್ಪಾದಕರ ಸಂಘದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಗೋಣಿಕೊಪ್ಪ ಪುತ್ತರಿ ರೈತ ಉತ್ಪಾದಕರ ಸಂಘದ ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾಗುವಂತೆ ಪುತ್ತರಿ ರೈತ ಉತ್ಪಾದಕರ ಸಂಘದ ಅಧ್ಯಕ್ಷರಾಗಿರುವ ಮನೆಯಪಂಡ ರಾಜಾ ಸೋಮಯ್ಯ ಅವರು ದಾನವಾಗಿ ನೀಡಿರುವ ಜಾಗದಲ್ಲಿ ಪೂಜೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಪ್ರಸ್ತುತ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸ್ವತಃ ಅಧ್ಯಕ್ಷ ಮನೆಯಪಂಡ ರಾಜಾ ಸೋಮಯ್ಯ ಅವರು ಸಂಘಕ್ಕೆ 25 ಸೆಂಟ್ ಜಾಗವನ್ನು ದಾನವಾಗಿ ನೀಡಿದ್ದರು. ಈ ಜಾಗದಲ್ಲಿ ರೈತರಿಗೆ ರೈತ ಪರಿಕರಗಳನ್ನು ನೇರವಾಗಿ ವಿತರಣೆ ಮಾಡಲು ಮತ್ತಷ್ಟು ಗೋದಾಮುಗಳ ಅವಶ್ಯಕತೆ ಇರುವದರಿಂದ ಕಟ್ಟಡ ನಿರ್ಮಿಸಲು ಭೂಮಿಪೂಜೆ ನಡೆಸಲಾಯಿತು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೋಟ್ರಂಗಡ ಅರುಣ್ ಅಪ್ಪಣ್ಣ, ಸಿಇಒ ಪೊನ್ನಣ್ಣ, ನಬಾರ್ಡ್ ಜಿಲ್ಲಾ ಮಹಾಪ್ರಬಂಧಕ ಎಂ.ಟಿ. ನಾಣಯ್ಯ, ಕೆವಿಕೆ ಮುಖ್ಯಸ್ಥ ಸಾಜುಜಾರ್ಜ್, ವಿಜ್ಞಾನಿ ಪ್ರಭಾಕರ್ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.