ಕೂಡಿಗೆ, ನ. 1: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯರಾದ ಕೆ.ವೈ. ರವಿ, ರಾಮಚಂದ್ರ ಸೇರಿದಂತೆ ಸರ್ವ ಸದಸ್ಯರು 14ನೇ ಹಣಕಾಸಿನ ಯೋಜನೆಯ ಬಗ್ಗೆ ಕ್ರಿಯಾಯೋಜನೆ ತಯಾರಿಕೆಗೆ ಒಕ್ಕೊರಲಿನ ತೀರ್ಮಾನ ಕೈಗೊಂಡರು. ಮೂಲಭೂತ ಸೌಲಭ್ಯಗಳಲ್ಲಿ ಕುಡಿಯುವ ನೀರು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆಕೊಡುವಂತೆ ಹೆಚ್ಚು ಅನುದಾನವನ್ನು ಕಾದಿರಿಸುವಂತೆ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಮಾಸಿಕ ಸಭೆಯಲ್ಲಿ ನಡೆದ ತೀರ್ಮಾನಗಳನ್ನು ಹಂತ ಹಂತವಾಗಿ ಕೈಗೊಂಡು ಸ್ಥಗಿತಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು. ಮುಂದಿನ ದಿನಗಳಲ್ಲಿ ನಡೆಯುವ ಗ್ರಾಮಸಭೆಯಲ್ಲಿ ಎಲ್ಲಾ ಕಾಮಗಾರಿಗಳಿಗೆ ಅನುಮೋದನೆಯನ್ನು ಪಡೆದು ಕಾಮಗಾರಿಗಳನ್ನು ನಡೆಸಲಾಗುವದು ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿ.ಜಿ. ಲೋಕೇಶ್ ಮಾತನಾಡಿ, ಸಭೆಗೆ ಸರ್ಕಾರದ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. 14ನೇ ಹಣಕಾಸಿನ ಯೋಜನೆಯ ಅನುಷ್ಠಾನಗೊಳಿಸುವದರ ಬಗ್ಗೆ ಹಾಗೂ ಕಾಮಗಾರಿಯ ಕ್ರಿಯಾಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಸದಸ್ಯರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವದು ಹಾಗೂ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಜಿ. ಮೋಹಿನಿ, ರತ್ನಮ್ಮ, ಹೆಚ್.ಎಸ್. ರವಿ, ಪುಷ್ಪ, ಜಯಶ್ರೀ, ಚಂದ್ರಿಕಾ, ಕೆ.ಎ. ದಸ್ವಿ, ಕೆ.ಬಿ. ರಾಮಚಂದ್ರ, ಕೆ.ವೈ.ರವಿ, ಕಾರ್ಯದರ್ಶಿ ಶಿಲ್ಪ, ಕಂದಾಯ ವಸೂಲಿಗಾರ ಕೆ.ಸಿ. ರವಿ ಇದ್ದರು.