ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಲ್ಲಿ ಅ. 31ರಂದು ನಡೆದ ಮತ ಎಣಿಕೆಯ ಸಂದರ್ಭದ ದೃಶ್ಯಗಳು.ಸುಂಟಿಕೊಪ್ಪ, ನ. 2: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಂಟಿಕೊಪ್ಪ ಕ್ಲಸ್ಟರ್ ಮಟ್ಟದ ವತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು.

ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಭಾವೈಕ್ಯತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಅವರು, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಮೇರು ವ್ಯಕ್ತಿತ್ವವನ್ನು ಬಣ್ಣಿಸಿದರು. ಭಾರತವನ್ನು ಒಗ್ಗೂಡಿಸಿದ ಹೆಮ್ಮೆಯ ನಾಯಕ ಪಟೇಲ್ ಅವರು ಭಾರತದ ಏಕೀಕರಣದ ಸರದಾರ ಎಂದು ಹೇಳಿದ ಅವರು, ಯುವ ಜನಾಂಗ ಮತ್ತು ವಿದ್ಯಾರ್ಥಿ ಸಮೂದಾಯ ರಾಷ್ಟ್ರ ನಾಯಕನ ಆದರ್ಶ ಮತ್ತು ವ್ಯಕ್ತಿತ್ವ ಪಾಲಿಸುವ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಎತ್ತಿ ಹಿಡಿಯಬೇಕು ಎಂದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್ ಮಾತನಾಡಿ, ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಾಲೆಗಳನ್ನು ಉಳಿಸಲು ಹೆಚ್ಚಿನ ಶ್ರಮ ವಹಿಸಬೇಕು ಎಂದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ಬಿ. ಪ್ರಕಾಶ್, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಬಿ.ಆರ್.ಪಿ. ಜಿ. ಶರತ್, ಸಿ.ಆರ್.ಪಿ.ಗಳಾದ ಪುರುಷೋತ್ತಮ್, ಬಿ.ಎನ್. ವಸಂತ್ ಕುಮಾರ್ ಇದ್ದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿ.ಆರ್. ಗೀತಾ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್.ಪಿ. ಶರತ್ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.