ಕುಶಾಲನಗರ, ನ. 1: ಕುಶಾಲನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ವಲಯಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವ ಉದ್ಯೋಗ ಯೋಜನೆಯಡಿ ಕೊಳವೆಬಾವಿಗೆ ರೂ. 1 ಲಕ್ಷ ಸಾಲ ಸೌಲಭ್ಯ ಪಡೆದಿದ್ದ ಸದಸ್ಯರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದ ಮೇರೆಗೆ ಸೋಮವಾರಪೇಟೆ ಹಾಗೂ ಕುಶಾಲನಗರದ 2 ವಲಯಗಳಿಗೆ ರೂ. 35 ಸಾವಿರ ಸಹಾಯ ಧನವನ್ನು ಯೋಜನೆಯ ಮೇಲ್ವಿಚಾರಕರಾದ ಗೀತಾ ಹಾಗೂ ಹರೀಶ್ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಮೇಲ್ವಿಚಾರಕ ಹರೀಶ್, ಕೃಷಿ ಚಟುವಟಿಕೆಗಾಗಿ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಲವು ಫಲಾನುಭವಿಗಳು ಸಾಲ ಸೌಲಭ್ಯವನ್ನು ಪಡೆದಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಆರ್ಥಿಕ ಸ್ಥಿತಿ ವೃದ್ಧಿಸಿಕೊಂಡಿದ್ದಾರೆ. ಪಡೆದಿದ್ದ ಒಂದು ಲಕ್ಷ ರೂಪಾಯಿಗಳ ಸಾಲದ ಮೊತ್ತವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ್ದಾರೆ. ಅಂತಹ ಫಲಾನುಭವಿಗಳನ್ನು ಗುರುತಿಸಿ 2 ವಲಯಗಳಿಂದ ಇಂದು ಫಲಾನುಭವಿಗಳಿಗೆ ಸಹಾಯ ಧನವನ್ನು ನೀಡಲಾಗಿದೆ ಎಂದರು. ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಾಲ ಸೌಲಭ್ಯವನ್ನು ನೀಡಲಿದ್ದು, ಇಂತಹ ಸೌಲಭ್ಯವನ್ನು ಪಡೆದು ಸಂಘದ ಸದಸ್ಯರು ತಮ್ಮ ಜೀವನದ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕೆಂದರು.

ಈ ಸಂದರ್ಭ ಯೋಜನೆಯ ಫಲಾನುಭವಿಗಳು, ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳು ಇದ್ದರು.