ಸೋಮವಾರಪೇಟೆ, ನ. 1: ನವೆಂಬರ್ ಒಂದರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಆಗಬಾರದು. ವರ್ಷ ಪೂರ್ತಿ ಕನ್ನಡದ ಕಾರ್ಯಕ್ರಮಗಳು ನಡೆಯಬೇಕು. ಕನ್ನಡದ ಮೇಲಿನ ಅಭಿಮಾನ ಕುಂಠಿತಗೊಳ್ಳಬಾರದು. ಭಾಷಾಭಿಮಾನ ಇದ್ದರೆ ಮಾತ್ರ ನಿಜವಾದ ಕನ್ನಡಿಗ ಎನಿಸಿಕೊಳ್ಳಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವದ ಸಂದೇಶ ನೀಡಿದ ತಹಶೀಲ್ದಾರ್ ಮಹೇಶ್, ಕನ್ನಡ ಎಂದರೆ ಬರೀ ನುಡಿಯಲ್ಲ. ಜಲವೆಂದರೆ ಕೇವಲ ನೀರಲ್ಲ;ಅದು ಒಂದು ಪಾವನ ತೀರ್ಥ ಎಂದು ನಿತ್ಯೋತ್ಸವ ಕವಿ ನಿಸಾರ್ ಅಹಮದ್ ತಿಳಿಸಿರುವದು ಅಕ್ಷರಶಃ ಸತ್ಯವಾದ ಮಾತು. ಪ್ರತಿಯೊಬ್ಬ ಕನ್ನಡಿಗರೂ ಕನ್ನಡದ ಹಬ್ಬವನ್ನು ಆಚರಿಸಬೇಕು ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ಕನ್ನಡದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು

(ಮೊದಲ ಪುಟದಿಂದ) ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಿಂದೇಟು ಹಾಕುತ್ತಿರುವದು ವಿಷಾದನೀಯ. ಆಡಳಿತದಲ್ಲಿ ಕನ್ನಡ ಇನ್ನೂ ಸಮರ್ಪಕವಾಗಿ ಜಾರಿ ಯಾಗಿಲ್ಲ. ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ನಡುವಿನ ಬದ್ಧತೆಯ ಕೊರತೆಯಿಂದಾಗಿ ಸರಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಹೆಚ್.ಎನ್.ತಂಗಮ್ಮ, ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರಾದ ಜೆ.ಸಿ.ಶೇಖರ್ ಮಾತನಾಡಿದರು. ವೇದಿಕೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಪಟ್ಟಣ ಪಂಚಾಯಿತಿ ಸದಸ್ಯ ಬಿ.ಆರ್. ಮಹೇಶ್ ಉಪಸ್ಥಿತರಿದ್ದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಲನಾ ಭರತ್ ಕಾರ್ಯಕ್ರಮ ನಿರ್ವಹಿಸಿದರು. ಬಿ.ಆರ್.ಪಿ. ಶೇಖರ್ ಸ್ವಾಗತಿಸಿ, ಸಿ.ಆರ್.ಪಿ. ಶಶಿಧರ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.