ಮಡಿಕೇರಿ, ನ. 1: ಕರುನಾಡಿನ ಅಲ್ಲಿ-ಇಲ್ಲಿ ಕೇಳಿ ಬರುತ್ತಿರುವ ಪ್ರತ್ಯೇಕತೆಯ ಕೂಗು ಶಮನಗೊಂಡು, ಏಕತೆಯೆಡೆಗೆ ಎಲ್ಲರೂ ಸಾಗುವ ಮುಖಾಂತರ; ಒಗ್ಗಟ್ಟನ್ನು ತೋರುವದ ರೊಂದಿಗೆ ಬಲಿಷ್ಠ ನಾಡನ್ನು ಕಟ್ಟೋಣ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕರೆ ನೀಡಿದರು. ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣದೊಂದಿಗೆ ಗೌರವರಕ್ಷೆ ಸ್ವೀಕರಿಸಿ ಮತನಾಡಿದ ಸಚಿವರು, ಕನ್ನಡ ನಾಡಿನ ಗತ ವೈಭವದ ಇತಿಹಾಸವನ್ನು ನೆನಪಿಸಿದರು.1956 ರಲ್ಲಿ ಮೈಸೂರು ರಾಜ್ಯ ಉದಯಗೊಂಡರೂ ಕನ್ನಡದ ಕವಿಗಳಾದ ಕುವೆಂಪು, ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ.ಎಂ. ಶ್ರೀಕಂಠಯ್ಯ ಮುಂತಾದವರು ಕರ್ನಾಟಕ ಎಂಬ ಹೆಸರನ್ನು ಕನ್ನಡ ರಾಜ್ಯಕ್ಕೆ ಕೊಡಬೇಕೆಂದು ಒತ್ತಿ ಹೇಳಿದರು. ಅಂದಿನ ಮುಖ್ಯಮಂತ್ರಿ ಗಳಾಗಿದ್ದ ಡಿ. ದೇವರಾಜ್ ಅರಸ್ರವರು 1973 ನವೆಂಬರ್ 1 ರಂದು ‘ಕರ್ನಾಟಕ ರಾಜ್ಯ’ ಎಂದು ನಾಮಕರಣ ಮಾಡಿದ್ದಾಗಿ ಸಚಿವರು ಬೊಟ್ಟು ಮಾಡಿದರು.
ನಾಡಿನ ಇತಿಹಾಸ: ಈ ಕನ್ನಡ ನಾಡುನುಡಿಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. 2 ಸಾವಿರ ವರ್ಷಗಳ ಹಿಂದೆಯೇ ಈ ಭಾಷೆಯನ್ನು ಮಾತನಾಡುವ ಜನ ಇದ್ದರು ಎಂಬದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉಲ್ಲೇಖಗಳಿವೆ.
ಕ್ರಿ.ಶ. 450 ರ ಕನ್ನಡ ಭಾಷೆಯ ಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳಿವೆ. ಕ್ರಿ.ಶ. 850ರ ಕನ್ನಡದ ಮೊಟ್ಟ ಮೊದಲ ಗ್ರಂಥ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರದ ಬಗ್ಗೆ ಉಲ್ಲೇಖವಿದೆ.
ಕನ್ನಡದ ಆದಿಕವಿ ಪಂಪ ಕನ್ನಡ ನಾಡಿನ ಬಗ್ಗೆ ತ್ಯಾಗದ ಬೋಗದ ಅಕ್ಕರದ ನಾಡೆಂದು ತಿಳಿಸುತ್ತಾ, ಇಲ್ಲಿ ಮನುಷ್ಯನಾಗಿ ಅಲ್ಲದಿದ್ದರೂ ಮರಿದುಂಬಿಯಾಗಿಯಾದರೂ ಹುಟ್ಟಬೇಕೆಂದು ಹಂಬಲಿಸಿದ್ದನ್ನು ಸಚಿವರು ಮೆಲುಕು ಹಾಡಿದರು.
ಚಾಲುಕ್ಯರ ಕಾಲದಲ್ಲಿ ಶತ್ರುಗಳಿಂದಲೇ ‘ಕರ್ನಾಟಕ ಬಲ ಅಜೇಯಂ’ ಎಂದು ಕರೆಸಿಕೊಂಡ ಪರಾಕ್ರಮಿಗಳು ನಮ್ಮ ಹಿರಿಯರು.... ರಾಜ್ಯ ಬರಗಾಲಕ್ಕೆ
(ಮೊದಲ ಪುಟದಿಂದ) ತುತ್ತಾದಾಗ ಪ್ರಜೆಗಳ ಹಿತಕ್ಕಾಗಿ ತನ್ನ ಕೈ ಬೆರಳನ್ನೆ ಕತ್ತರಿಸಿ ದೇವಿಗೆ ಅರ್ಪಿಸಿದ ದೊರೆ ಅಮೋಘವರ್ಷ; ಇಂತಹ ನಾಡಿನಲ್ಲಿ ಮುತ್ತು ರತ್ನಗಳನ್ನು ಬೀದಿಬೀದಿಗಳಲ್ಲಿ ಸೇರಿನಲ್ಲಿ ಅಳೆದು ಮಾರಾಟ ಮಾಡುತ್ತಿದ್ದ ಶ್ರೀಮಂತಿಕೆ ನಮ್ಮದಾಗಿತ್ತು ಎಂದು ಸ್ಮರಿಸಿದರು.
21ನೇ ಶತಮಾನದ ಈ ಹೊತ್ತಿನಲ್ಲಿ ಕನ್ನಡ ಆಧುನೀಕತೆಯೊಂದಿಗೆ ತನ್ನದೇ ಆಸ್ಮಿತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಒಂದೆಡೆ ಅನ್ಯ ಭಾಷೆಗಳಲ್ಲಿ ಸಂಘರ್ಷಗಳಿರುವಂತೆ; ಪ್ರಾದೇಶಿಕ ಭಾಷೆಗಳನ್ನು ಮಟ್ಟ ಹಾಕುವ ರೀತಿಯಲ್ಲಿ ಇಂಗ್ಲೀಷ್ ಭಾಷೆ ಬೆಳೆಯುತ್ತಿದೆ. ಇಂದು ಕರ್ನಾಟಕದಲ್ಲಿ ಕನ್ನಡ ಬಲ್ಲವರ ಸಂಖ್ಯೆ ಕುಸಿಯುತ್ತಿದೆ. ಕನ್ನಡ ಮಾತ್ರ ಬಲ್ಲವನು ಕೀಳರಿಮೆಯಿಂದ ತಲೆ ತಗ್ಗಿಸುವ ಸ್ಥಿತಿಯಾಗಿದೆ. ಗಡಿಗಳಲ್ಲಿ ನೆರೆಭಾಷೆಗಳ ಪ್ರಾಬಲ್ಯ, ಆಡಳಿತದಲ್ಲಿ ಕನ್ನಡ ಸಂಪೂರ್ಣ ಬಳಕೆಯಾಗಬೇಕೆಂಬ ಹೋರಾಟ ನಿರಂತರ ಪ್ರಕ್ರಿಯೆಯಾಗಿದೆ ಎಂದರು.
ನಾವು ಕನ್ನಡದೊಂದಿಗೆ ಇತರ ಭಾಷೆಯನ್ನು ಕಲಿಯಬೇಕು ಗಾಂಧೀಜಿ ಹೇಳಿದಂತೆ ‘ಬೇರೆ ಸಂಸ್ಕøತಿಯನ್ನು ಪ್ರೀತಿಸು; ನಮ್ಮ ಸಂಸ್ಕøತಿಯಲ್ಲಿ ಜೀವಿಸು’ ಎಂಬದರ ಅರಿವು ನಮಗಿರಬೇಕು. ಈ ಮಣ್ಣಿಗೊಂದು, ಈ ನುಡಿಗೊಂದು, ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ, ಆದ್ದರಿಂದ ಪ್ರಾದೇಶಿಕ ಸಂಸ್ಕøತಿಯನ್ನು ಎತ್ತಿಹಿಡಿಯುವ ಕಾರ್ಯ ನಾವು ಮಾಡಬೇಕಾಗಿದೆ ಎಂದು ಸಾ.ರಾ. ಮಹೇಶ್ ಕರೆ ನೀಡಿದರು.
ಬಲಿಷ್ಠರಾಗಬೇಕು: ನಾಡು-ನುಡಿ ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗುತ್ತಿದೆ. ಜ್ಞಾನ ಹಾಗೂ ತಂತ್ರಜ್ಞಾನ ಸಂಬಂಧಿ ಮಾಹಿತಿಗಳು ಕನ್ನಡಿಗರಿಗೆ ಕನ್ನಡದಲ್ಲೆ ಅವಶ್ಯಕವಾಗಿ ದೊರೆಯುವಂತೆ ಮಾಡಬೇಕು. ಆರ್ಥಿಕವಾಗಿ ಕನ್ನಡಿಗರು ಮತ್ತಷ್ಟು ಬಲಿಷ್ಠರಾಗಬೇಕು ಎಂದು ಕರೆ ನೀಡಿದರು
ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಸೇರಿದಂತೆ ಇತರ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪಥ ಸಂಚಲನ: ಕೊಡಗು ಪೊಲೀಸ್ ಸಶಸ್ತ್ರದಳ, ಗೃಹರಕ್ಷಕ ದಳ, ಅರಣ್ಯ ಸಿಬ್ಬಂದಿ, ವಿವಿಧ ಶಾಲಾ-ಕಾಲೇಜುಗಳ ಸ್ಕೌಟ್ಸ್, ಗೈಡ್ಸ್, ಎನ್ಸಿಸಿ, ಸೇವಾದಳ, ಮಕ್ಕಳ ಪೊಲೀಸ್ ದಳ ಮುಂತಾದ ತಂಡಗಳ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಪ್ಪಗೌಡ ಪಥ ಸಂಚಲನ ಮುನ್ನಡೆಸಿದರು.
ಸ್ತಬ್ಧ ಚಿತ್ರ: ನಗರಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಕೃಷಿ ಇಲಾಖೆ ಮುಂತಾದವರಿಂದ ಆಯಾ ಇಲಾಖೆಗಳ ಸಾಧನೆ-ಧ್ಯೇಯಗಳ ಸ್ತಬ್ಧ ಚಿತ್ರ ಅನಾವರಣದೊಂದಿಗೆ ಮೆರವಣಿಗೆಯಲ್ಲಿ ಸಾಗಿದವು.
ಕನ್ನಡ ಕಲರವ: ನಗರದ ಸಂತ ಜೋಸೆಫರ ಶಾಲೆ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಸಂತ ಮೈಕಲರ ಶಾಲೆ, ರಾಜರಾಜೇಶ್ವರಿ ಶಾಲೆ, ಬ್ಲಾಸಂ ಶಾಲೆ, ಸರಕಾರಿ ಪ್ರಾಥಮಿಕ ಶಾಲೆ, ಪ.ಪೂ. ಕಾಲೇಜು, ಪ್ರೌಢಶಾಲಾ ಮಕ್ಕಳು ಸಾಂಸ್ಕøತಿಕ ರೂಪಕಗಳೊಂದಿಗೆ ಕರುನಾಡ ಹಿರಿಮೆಯ ಗೀತೆಗಳಿಂದ ಗಮನ ಸೆಳೆದರು.
ಈ ವೇಳೆ ಕಳೆದ ಗಣರಾಜ್ಯೋತ್ಸವ ವೇಳೆ ನವದೆಹಲಿಯ ಪೆರೇಡ್ನಲ್ಲಿ ಭಾಗವಹಿಸಿದ್ದ ಫೀ.ಮಾ. ಕಾರ್ಯಪ್ಪ ಕಾಲೇಜಿನ ಎನ್ಸಿಸಿ ಕೆಡೆಟ್ಗಳಾದ ಜೋವಿನ್ ಜೋಸೆಫ್ ಹಾಗೂ ಕೃತೇಶ್ ಎಂ.ಸಿ. ಅವರುಗಳನ್ನು ಗೌರವಿಸಲಾಯಿತು. ‘ಗಾಂಧಿ ಗ್ರಾಮ’ ಪ್ರಶಸ್ತಿ ಪುರಸ್ಕøತ ಹೆಬ್ಬಾಲೆ, ಪಾಲಿಬೆಟ್ಟ, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಇಂದಿನ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಶಾಲಾ ತಂಡಗಳು, ಸ್ತಬ್ಧ ಚಿತ್ರಗಳಿಗೆ ಬಹುಮಾನ ನೀಡಲಾಯಿತು. ಕನ್ನಡ ಪಠ್ಯದೊಂದಿಗೆ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಪೊಲೀಸ್ ವಾದ್ಯ ತಂಡ ರಾಷ್ಟ್ರ ಗೀತೆಯೊಂದಿಗೆ; ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮಕ್ಕಳು ನಾಡಗೀತೆಯೊಂದಿಗೆ ರೈತ ಗೀತೆ ಹಾಡಿದರು. ಸರಕಾರಿ ಪ್ರೌಢಶಾಲಾ ಅಧ್ಯಾಪಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಸ್ಕøತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ ಹಾಗೂ ಪೂಜಾ ಕುಣಿತ ಕಾರ್ಯಕ್ರಮ ಮೂಡಿಬಂತು.