ವೀರಾಜಪೇಟೆ, ನ.2: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯ ಚುನಾವಣೆಯಲ್ಲಿ ಹದಿನೆಂಟು ಸ್ಥಾನಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 6 ಜೆ.ಡಿ.ಎಸ್.1 ಹಾಗೂ ಪಕ್ಷೇತರರು 3 ಸ್ಥಾನಗಳನ್ನು ಗಳಿಸಿರುವದರಿಂದ ಯಾರಿಗೂ ಸ್ಪಷ್ಟ ಬಹುಮತ ದೊರೆತಿರುವದಿಲ್ಲ. ಇದರಿಂದ ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಕಾನೂನು ಬದ್ಧವಾಗಿ ಶಾಸಕರು ಹಾಗೂ ಸಂಸದರ ಮತಗಳು ಲಭ್ಯವಾದರೂ ಬಿಜೆಪಿ ಹತ್ತು ಮತಗಳ ಬಹುಮತಕ್ಕೆ ಸೀಮಿತವಾಗುತ್ತದೆ.

ಚುನಾವಣೆಯಲ್ಲಿಯೂ ಕಾಂಗ್ರೆಸ್ ಆರು ಸ್ಥಾನಗಳನ್ನು ಪಡೆದಿದ್ದು ಪಕ್ಷೇತರ ನಾಲ್ಕು ಸ್ಥಾನಗಳ ಬೆಷರತ್ ಬೆಂಬಲ ಪಡೆದು ನಿಚ್ಚಳ ಬಹುಮತ ಪಡೆದರೂ ಎರಡು ಪಕ್ಷಗಳ ನಡುವೆ ಮತಗಳು ಸಮಬಲವನ್ನು ಹೊಂದಿರದ ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ನಡೆಸುವ ಲಾಟರಿಯ ಅದೃಷ್ಟ ನಿರ್ಣಾಯಕವಾಗಲಿದೆ.

ಭಾರತೀಯ ಜನತಾ ಪಾರ್ಟಿ ಲಾಟರಿಯಿಂದಲೂ ಜಯ ಸಾಧಿಸಿದರೂ ಈಗ ಸರಕಾರದ ಮೀಸಲಾತಿ ಆದೇಶದಂತೆ ಬಿ.ಸಿ.ಎಂ. (ಎ) ಅಭ್ಯರ್ಥಿಯಾದ ಹದಿಮೂರನೇ ವಾರ್ಡ್‍ನಿಂದ ಬಿಜೆಪಿಯಿಂದ ಗೆಲವು ಸಾಧಿಸಿರುವ ಕೆ.ಬಿ.ಹರ್ಷವರ್ಧನ್‍ಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ. ಉಪಾಧ್ಯಕ್ಷ ಸ್ಥಾನ ಮಹಿಳಾ ಸ್ಥಾನ ಮೀಸಲಾತಿ ಯಾಗಿರುವದರಿಂದ ಬಿಜೆಪಿ ನಗರ ಸಮಿತಿ ಅಧ್ಯಕ್ಷ ಅನಿಲ್ ಅವರ ಪತ್ನಿ ಟಿ.ಕೆ.ಯಶೋಧ ಅವರಿಗೆ ಲಭ್ಯವಾಗಲಿದೆ.

ಲಾಟರಿಯಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದರೆ ಮೂರನೇ ವಾರ್ಡ್‍ನಿಂದ ಮಾಜಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ವಿರುದ್ಧ ಜಯ ಸಾಧಿಸಿದ ಡಿ.ಪಿ. ರಾಜೇಶ್, ಇದೇ ಮೀಸಲಾತಿಗೆ ಸೇರಿದ 14ನೇ ವಾರ್ಡ್‍ನಿಂದ ಮಾಜಿ ಅಧ್ಯಕ್ಷ ಇ.ಸಿ.ಜೀವನ್‍ನ್ನು ಪರಾಭವಗೊಳಿಸಿದ ಸಿ.ಕೆ.ಪೃಥ್ವಿನಾಥ್ ಇದಲ್ಲದೆ ಒಂಭತ್ತನೇ ವಾರ್ಡ್‍ನಿಂದ ಜಯ ಸಾಧಿಸಿರುವ ಕೆ.ಎ. ಮಹಮ್ಮದ್ ರಾಫಿ ಅವರುಗಳಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ.

ಈ ಮೂವರ ಪೈಕಿ ಮಾಜಿ ಅಧ್ಯಕ್ಷರನ್ನು ಸೋಲಿಸಿ ಅತ್ಯಧಿಕ ಮತಗಳನ್ನು ಪಡೆದ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ದೊರೆಯಲಿದೆ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಒಂದನೇ ವಾರ್ಡ್‍ನಲ್ಲಿ ಮಾಜಿ ಉಪಾಧ್ಯಕ್ಷೆಯನ್ನು ಕೇವಲ ಮೂರು ಮತಗಳ ಅಂತರದಿಂದ ಸೋಲಿಸಿದ ಕಾಂಗ್ರೆಸ್ ಪಕ್ಷದ ಫಸಿಹ ತಬ್ಸಮ್ ಅರ್ಹತೆ ಪಡೆದಿರುವ ಏಕೈಕ ಮಹಿಳೆ ಆಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ರಾಜ್ಯದ ಚುನಾವಣಾ ಆಯೋಗ ದಿನಾಂಕವನ್ನು ನಿಗಧಿ ಮಾಡಬೇಕಾಗಿದೆ ಎಂದು ತಾಲೂಕು ಸಹಾಯಕ ಚುನಾವಣಾಧಿಕಾರಿ ಆರ್.ಗೋವಿಂದರಾಜು ತಿಳಿಸಿದ್ದಾರೆ.