ಮಡಿಕೇರಿ, ನ. 1: ಮೂರ್ನಾಡು ಪದವಿ ಕಾಲೇಜು ಮೈದಾನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಹಾಕಿ ತರಬೇತಿ ಶಿಬಿರ ಉದ್ಘಾಟನೆಗೊಂಡಿತು.

ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಶಿಬಿರದ ಉದ್ಘಾಟನೆಯನ್ನು ಮಾಡಿ, ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ದೊರಕುತ್ತಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಹಾಗೂ ವಿದ್ಯಾಸಂಸ್ಥೆಯಲ್ಲಿ ಕ್ರೀಡೆಗಾಗಿ ಅಕಾಡೆಮಿ ಸ್ಥಾಪನೆಯಾಗಿದ್ದು, ಇದರ ಮುಖಾಂತರ ಕ್ರೀಡೆಗೆ ಎಲ್ಲಾ ಸೌಕರ್ಯಗಳನ್ನು ನೀಡಲಾಗುತ್ತಿದೆ. ಇದನ್ನು ಉಪಯೋಗಿಸಿಕೊಂಡು ಕೀರ್ತಿ ತರುವಂತಾಗಬೇಕೆಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ಕ್ರೀಡಾಪಟುಗಳು ಕಠಿಣ ಪರಿಶ್ರಮ ಮೈಗೂಡಿಸಿಕೊಳ್ಳಬೇಕು. ಕ್ರೀಡಾ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಕ್ರೀಡೆ ಜೊತೆಗೆ ಪಠ್ಯಗಳಲ್ಲು ಸರಿಸಮಾನತೆಯನ್ನು ಕಾಯ್ದುಕೊಂಡಾಗ ಯಶಸ್ಸು ಸಾಧ್ಯವೆಂದು ತಿಳಿಸಿದರು.

ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಜನರಲ್ ತಿಮ್ಮಯ್ಯ ಕ್ರೀಡಾ ಅಕಾಡೆಮಿ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ವಾಲಿಬಾಲ್ ಆಟಗಾರ ಕಂಬಿರಂಡ ಯೋಗೇಶ್ ಅಪ್ಪಯ್ಯ, ದೈಹಿಕ ನಿರ್ದೇಶಕ ಮತ್ತು ಶಿಬಿರದ ತರಬೇತುದಾರ ಕಂಬಿರಂಡ ಬೋಪಣ್ಣ, ಆಂತರಿಕ ಗುಣಮಟ್ಟ ಮೌಲ್ಯಮಾಪನ ಸಮಿತಿ ಸಂಚಾಲಕ ನಾಟೋಳಂಡ ನವೀನ್, ಕಿಡ್ಸ್ ಎಡುಕೇರ್‍ನ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಉಪಸ್ಥಿತರಿದ್ದರು.