ಮುಖ್ಯಮಂತ್ರಿಗೆ ಶಾಸಕರಿಂದ ವಾಗ್ಬಾಣ

*ಗೋಣಿಕೊಪ್ಪಲು, ನ. 2: ಭಾಷಣ ಮಾಡಿ ಕಣ್ಣೀರು ಸುರಿಸಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಶಾಸಕ ಕೆ.ಜಿ. ಬೊಪಯ್ಯ ಹೇಳಿದರು.

ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ತೆರಾಲು ಗ್ರಾಮದ ಬಿ.ಜೆ.ಪಿ. ಕಾರ್ಯಕರ್ತರಿಂದ ಇತ್ತೀಚೆಗೆ ನಡೆದ ಶಾಸಕರಿಗೆ ಸನ್ಮಾನ ಸಭೆ ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವೇದಿಕೆಗಳಲ್ಲಿ ಬೊಗಳೆ ಬಿಡುತ್ತಾ, ಕಣ್ಣೀರು ಹಾಕುತ್ತಾ ಭರವಸೆ ನೀಡುವ ಮುಖ್ಯಮಂತ್ರಿ ಗಳಿಂದ ಯಾವದೇ ಕೆಲಸಗಳು ಕಾರ್ಯಗತವಾಗುತ್ತಿಲ್ಲ. ತಮ್ಮ ಗೌರವ ವನ್ನು ಉಳಿಸಿಕೊಳ್ಳುವ ಕಾರ್ಯ ಮುಖ್ಯಮಂತ್ರಿಯಿಂದ ನಡೆಯ ಬೇಕಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಗೆ ಪ್ರಾಧಿಕಾರದ ಮೂಲಕ ಪರಿಹಾರ ಅನುದಾನ ಒದಗಿಸಿಕೊಡಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು ಇದುವರೆಗೆ ಕಾರ್ಯರೂಪಕ್ಕೆ ತಂದಿಲ್ಲ. ಉಸ್ತುವಾರಿ ಸಚಿವರನ್ನು ಈ ಬಗ್ಗೆ ಮಾಹಿತಿ ಕೇಳಿದರೆ ಲೋಕಸಭೆ ಚುನಾವಣೆ ನಂತರ ಕ್ರಮ ಕೈಗೊಳ್ಳುವದಾಗಿ ತಿಳಿಸುತ್ತಾರೆ.

ಪ್ರಕೃತಿ ವಿಕೋಪದಿಂದ ಕೊಡಗಿಗೆ ಅಪಾರ ನಷ್ಟ ಸಂಭವಿಸಿದೆ. ಆದರೆ ಇದನ್ನೇ ಬಂಡವಾಳವಾಗಿರಿಸಿಕೊಂಡ ಕೆಲವರು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಸಂದಾಯವಾಗಿದೆ. ಆದರೂ ಕೊಡಗಿನಲ್ಲಿ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ. 1200 ಮನೆಗಳು ನಿರ್ಮಾಣವಾಗಬೇಕಾಗಿದೆ.

ಶೇ. 80 ರಷ್ಟು ಕಾಫಿ, ಕಾಳುಮೆಣಸು ನಷ್ಟವಾಗಿದೆ. ಬೆಳೆಗಾರರು-ರೈತರು ಸಂಕಷ್ಟದಲ್ಲಿದ್ದಾರೆ. ಪರಿಹಾರಕ್ಕಾಗಿ ವಿಶೇಷ ಅನುದಾನ ನೀಡಿ ಎಂದು ಮನವಿ ಮಾಡಿದರು. ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಿಲ್ಲ. ಸಭೆ-ಸಮಾರಂಭಗಳಲ್ಲಿ ಕಣ್ಣೀರು ಸುರಿಸುವದೇ ಕುಮಾರಸ್ವಾಮಿಯವರ ಸಾಧನೆಯಾಗಿದೆ ಎಂದು ಹೇಳಿದರು.

ಯಾವದೇ ಇಲಾಖೆಯ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿ ನಷ್ಟ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಕೆ.ಇ.ಬಿ. ಇಲಾಖೆಯವರು ಮಾತ್ರ ತಮ್ಮ ಪ್ರಾಮಾಣಿಕ ಕರ್ತವ್ಯ ಮೆರೆದಿದ್ದಾರೆ. ಹಗಲು-ರಾತ್ರಿ ಎನ್ನದೇ 200 ಕ್ಕೂ ಹೆಚ್ಚು ಜನ ದುಡಿದು ವಿದ್ಯುತ್ ಸಂಪರ್ಕ ನೀಡಲು ಶ್ರಮ ವಹಿಸಿದ್ದು ಶ್ಲಾಘನೀಯ ಎಂದರು. ಇರುವ ಅಲ್ಪ ಅನುದಾನದಲ್ಲೆ ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವದು. ರಸ್ತೆ ದುರಸ್ತಿ ಮಾಡಲಾಗುವದು ಎಂದು ತಿಳಿಸಿದರು.

ಜಿ.ಪಂ. ಸದಸ್ಯೆ ಅಪ್ಪಡೇರಂಡ ಭವ್ಯ ಮಾತನಾಡಿ, ಜಿ.ಪಂ. ಅನುದಾನವನ್ನು ಸಮರ್ಪಕವಾಗಿ ಬಳಸಿ ಕುಗ್ರಾಮವನ್ನು ಅಭಿವೃದ್ಧಿ ಪಡಿಸಲಾಗುವದು ಎಂದರು.

ಬಿ.ಜೆ.ಪಿ. ಬಿರುನಾಣಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಣ್ಣಳಮಾಡ ರಾಯ್ ಅಧ್ಯಕ್ಷತೆಯಲ್ಲಿ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಅರುಣ್ ಭೀಮಯ್ಯ, ಕಾಫಿ ಬೋರ್ಡ್ ಸದಸ್ಯ ಬೊಟ್ಟಂಗಡ ರಾಜು, ಬಿ.ಜೆ.ಪಿ. ಕಾರ್ಯದರ್ಶಿ ಬೊಟ್ಟಂಗಡ ಗಿರೀಶ್ ನಿರೂಪಿಸಿ, ವಂದಿಸಿದರು.

.