ಕುಶಾಲನಗರ, ನ. 2 : ಕಾವೇರಿ ನದಿ ತಟಕ್ಕೆ ಬೃಹತ್ ಬಂಡೆಗಳನ್ನು ತುಂಬಿ ಮಣ್ಣು ಮುಚ್ಚಿ ಅಕ್ರಮ ಶೆಡ್ ನಿರ್ಮಿಸಿ ಕಲುಷಿತ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹರಿಸುತ್ತಿರುವ ಪ್ರಕರಣವೊಂದು ಕುಶಾಲನಗರದ 1ನೇ ವಾರ್ಡ್‍ನಲ್ಲಿ ಪತ್ತೆಯಾಗಿದೆ. ಮಾರ್ಕೆಟ್ ರಸ್ತೆಯ ಸಮೀಪದಲ್ಲಿ ಮಂಜುನಾಥ್ ಎಂಬವರು ಈ ರೀತಿ ಅಕ್ರಮವಾಗಿ ವಾಹನಗಳ ಸರ್ವೀಸ್ ಸ್ಟೇಷನ್ ಪ್ರಾರಂಭಿಸಿದ್ದು ಈ ಬಗ್ಗೆ ಸ್ಥಳೀಯ ನಾಗರಿಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯ್ತಿಯಿಂದ ತಕ್ಷಣ ತೆರವುಗೊಳಿಸುವಂತೆ ನೋಟೀಸ್ ನೀಡಲಾಗಿದೆ.
ತಮ್ಮ ಮನೆಯ ಬದಿಯಲ್ಲಿ ಕಾವೇರಿ ನದಿ ಹರಿಯುತ್ತಿದ್ದು ಬೃಹತ್ ಬಂಡೆಗಳನ್ನು ನದಿ ಬದಿಯಲ್ಲಿ ತುಂಬಿಸಿ ಅಲ್ಲಿ ನಿರ್ಮಾಣ ಗೊಂಡಿರುವ ಒಳಚರಂಡಿ ಮಂಡಳಿ ಕಾಮಗಾರಿಯನ್ನು ನಾಶಗೊಳಿಸ ಲಾಗಿದೆ. ಇದರ ಮೇಲ್ಭಾಗದಲ್ಲಿ ಶೆಡ್ ನಿರ್ಮಿಸಿ ದ್ವಿಚಕ್ರ ವಾಹನಗಳ ವಕ್ರ್ಸ್‍ಶಾಪ್ ತೆರೆದಿದ್ದು ವಾಹನಗಳನ್ನು ತೊಳೆಯುವ ಮೂಲಕ ನದಿ ಕಲುಷಿಕೆಗೊಳ್ಳುತ್ತಿರುವದು ಕಂಡುಬಂದಿದೆ. ಈ ಬಗ್ಗೆ ಮಾಜಿ ಯೋಧ ಸೋಮಣ್ಣ ಅವರು ಮಾಹಿತಿ ನೀಡಿದ್ದು ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ವಿಷಯ ತಿಳಿದ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಒಳಚರಂಡಿ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತಕ್ಷಣ ಕಾಮಗಾರಿ ಸ್ಥಗಿತಗೊಳಿಸಿ ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಿದ್ದಾರೆ.