ಸುರೇಶ್ ಪ್ರಭು

ಬೆಂಗಳೂರು, ನ. 2: ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಕೇಂದ್ರ ಸರಕಾರದಿಂದ ಅಗತ್ಯ ನೆರವು ನೀಡಲಾಗುವದು ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಸುರೇಶ್ ಪ್ರಭು ಭರವಸೆ ನೀಡಿದರು.

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ 60ನೇ ವಾರ್ಷಿಕ ಸಮ್ಮೇಳನ ಕಾರ್ಯಕ್ರಮಕ್ಕೆ ವೀಡಿಯೋ ಸಂದೇಶದ ಮೂಲಕ ಶುಭ ಹಾರೈಸಿದ ಅವರು, ಪ್ರವಾಹದಿಂದ ಕೊಡಗು ಭಾಗದಲ್ಲಿ ಉಂಟಾಗಿರುವ ನಷ್ಟದ ಕುರಿತು ಮಾಹಿತಿ ಪಡೆಯಲಾಗಿದ್ದು, ಕೇಂದ್ರ ಸರಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವದು ಎಂದು ಆಶ್ವಾಸನೆ ನೀಡಿದರು.

ಕೊಡಗು ಭಾಗದಲ್ಲಿ ಕಾಫಿ, ಟೀ, ಕರಿಮೆಣಸು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಅದರಂತೆ ಕೈಗೊಳ್ಳಬೇಕಿರುವ ಕ್ರಮಗಳು ಕುರಿತು ಅಸೋಸಿಯೇಷನ್ ಪ್ರಸ್ತಾವನೆ ಸಲ್ಲಿಸಿದರೆ, ಅದಕ್ಕೆ ಕೇಂದ್ರದಿಂದ ಅಗತ್ಯ ಪರಿಹಾರ ನೀಡಲು ಪ್ರಯತ್ನಿಸಲಾಗುವದು ಎಂದು ಭರವಸೆ ನೀಡಿದರು.

ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಮಾತನಾಡಿ, ವಿಶ್ವದಾದ್ಯಂತ ನೈಸರ್ಗಿಕ ಕಾಫಿ ಉತ್ಪನ್ನಗಳ ಮಾರಾಟ ಕಟ್ಟಡ ವಿಸ್ತರಿಸುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಅದರ ನಡುವೆಯೇ ಕಾಫಿ ಹಾಗೂ ಇತರ ತೋಟಗಾರಿಕೆ ಬೆಳೆಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳ ಪರಿಹಾರಕ್ಕೆ ಸರಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.

ಬೇರೆ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವದರಿಂದ ಜಾಗತಿಕ ಮಾರುಕಟ್ಟೆ ತೆರೆದುಕೊಂಡರೂ, ಅದರಲ್ಲಿನ ಲೋಪಗಳಿಂದ ಬೇರೆ ದೇಶದ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸಿ ನಮ್ಮ ಉತ್ಪನ್ನಗಳಿಗೆ ಹೊಡೆತ ನೀಡುತ್ತಿವೆ. ಉದಾಹರಣೆಗೆ ಹಿಂಬಾಗಿಲ ಮೂಲಕ ವಿಯೆಟ್ನಾಂ ಕಾಳುಮೆಣಸು ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿರುವದರಿಂದ ನಮ್ಮ ಉತ್ಪನ್ನಗಳಿಗೆ ಬೆಲೆಯಿಲ್ಲದಂತಾಗಿದೆ. ಹೀಗಾಗಿ ಒಪ್ಪಂದದಲ್ಲಿನ ಇಂತಹ ಲೋಪಗಳನ್ನು ಸರಿಪಡಿಸುವ ಕುರಿತು ಲೋಕಸಭೆಯಲ್ಲಿ ಚರ್ಚಿಸಲಾಗುವದು ಎಂದು ಹೇಳಿದರು.

ಅಸೋಸಿಯೇಷನ್ ಅಧ್ಯಕ್ಷ ಹೆಚ್.ಟಿ. ಪ್ರಮೋದ್, ಕಾಫಿ, ಟೀ, ಕರಿಮೆಣಸು ಸೇರಿದಂತೆ ವಾಣಿಜ್ಯ ಬೆಳೆಗಳ ಸ್ಥಿತಿಗತಿ ಹಾಗೂ ಅವುಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಹಿಂದಿನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಎಂ.ಬಿ. ಗಣಪತಿ, ಕಾರ್ಯದರ್ಶಿ ಅನಿಲ್, ಮಾಜಿ ಅಧ್ಯಕ್ಷ ಬೋಜೇಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.