ಮಡಿಕೇರಿ, ನ.1: ಕೊಡವ ಜನಾಂಗದ ವಿವಿಧ ಬೇಡಿಕೆಗಳು, ಹಕ್ಕೊತ್ತಾಯಗಳನ್ನು ಮುಂದಿರಿಸಿ ಕಳೆದ ಹಲವು ವರ್ಷಗಳಿಂದ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ.) ಸಂಘಟನೆ ನಡೆಸುತ್ತಿರುವ ಪ್ರತಿಭಟನಾತ್ಮಕ ಹೋರಾಟ 24ನೇ ವರ್ಷಕ್ಕೆ ಕಾಲಿರಿಸಿದೆ.

ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ದೆಹಲಿಗೆ ತೆರಳಿರುವ ಸಂಘಟನೆಯ ಕಾರ್ಯಕರ್ತರು ಇಂದು ಸಂಸತ್ ಭವನದ ಮುಂಭಾಗದ ಸಂಸದ್ ಮಾರ್ಗ್‍ನಲ್ಲಿ ಸಾಂಪ್ರದಾಯಿಕ ಧಿರಿಸು, ಕೋವಿ- ಕತ್ತಿಯಂತಹ ಸಾಂಪ್ರದಾಯಿಕ ಪರಿಕರಗಳೊಂದಿಗೆ ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭ ಕೊಡವರ ಸ್ವಯಂ ನಿರ್ಣಯ ಹಕ್ಕು- ಭೂ ರಾಜಕೀಯ ಆಶೋತ್ತರಗಳ ಈಡೇರಿಕೆ ಸೇರಿದಂತೆ ಇನ್ನಿತರ ಹಲವು ಹಕ್ಕುಗಳಿಗೆ ರಾಜ್ಯಾಂಗ ಭದ್ರತೆಯನ್ನು ನೀಡುವಂತೆ ಒತ್ತಾಯಿಸಿ ಸಂಬಂಧಿಸಿದ ಹಲವು ಪ್ರಮುಖರಿಗೆ, ಉನ್ನತ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು.

ಕೊಡಗು ಅಭಿವೃದ್ಧಿ ಮಂಡಳಿ ರಚನೆ, ಜಮ್ಮಾಭೂಮಿ ಸಂಬಂಧ 2011ರ ಕಂದಾಯ ಕಾಯ್ದೆ ತಿದ್ದುಪಡಿ ಅನುಷ್ಠಾನಕ್ಕೆ ಕ್ರಮ, ಕೋವಿ ಹಕ್ಕು ಮುಂದುವರಿಕೆ, ರಾಜಕೀಯ ಮೀಸಲಾತಿ, ಬುಡಕಟ್ಟು ಸ್ಥಾನಮಾನದ ಮಾನ್ಯತೆ, ಗೋವಧೆ ನಿಷೇಧ ಮತ್ತಿತರ ಬೇಡಿಕೆಗಳನ್ನು ಮುಂದಿಡಲಾಗಿದೆ.

ಇಂದು ಫ್ರೆಂಚ್ ರಾಯಭಾರ ಕಚೇರಿ ಎದುರು ಪ್ರತಿಭಟನೆ

ತಾ. 2ರಂದು (ಇಂದು) ಸಿ.ಎನ್.ಸಿ. ಕಾರ್ಯಕರ್ತರು ಎನ್.ಯು. ನಾಚಪ್ಪ ನೇತೃತ್ವದಲ್ಲಿ ಟಿಪ್ಪುವಿನಿಂದ ಈ ಹಿಂದೆ ನಡೆದ ದೇವಟ್‍ಪರಂಬು ನರಮೇಧಕ್ಕೆ ಸಂಬಂಧಿಸಿದಂತೆ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿ ಬೆಂಬಲ ನೀಡಿದ್ದ ಆರೋಪದಂತೆ ಫ್ರೆಂಚ್ ಸರಕಾರ ಕೊಡವರ ಬಹಿರಂಗ ಕ್ಷಮೆಯಾಚಿಸ ಬೇಕೆಂದು ಆಗ್ರಹಿಸಿ ಧರಣಿ ನಡೆಸಲಿದೆ. ನವದೆಹಲಿಯ ಚಾಣಕ್ಯಪುರಿ ಯಲ್ಲಿರುವ ಫ್ರೆಂಚ್ ರಾಯಭಾರ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಲಾಗುವದೆಂದು ನಾಚಪ್ಪ ತಿಳಿಸಿದ್ದಾರೆ.