ಗೋಣಿಕೊಪ್ಪ ವರದಿ, ನ. 1: ಹಾತೂರು- ಕೆ. ಬೈಗೋಡು ಗ್ರಾಮದಲ್ಲಿ ಹಸುವಿನ ಮೇಲೆ ಧಾಳಿ ನಡೆಸಿ ಆತಂಕ ಮೂಡಿಸಿದ್ದ ವ್ಯಾಘ್ರ ಸಮೀಪದ ನಲ್ವತೋಕ್ಲು, ಚೋಕಂಡಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ. ಸ್ಥಳೀಯರಿಗೆ ಕಾಣಿಸಿಕೊಂಡಿದ್ದು, ಹಾತೂರು ಭಾಗದಿಂದ ಮಾಲ್ದಾರೆಯತ್ತ ಸಾಗುತ್ತಿರುವದು ಭಯ ನೀಗಿಸಿದೆ. ಮಾಲ್ದಾರೆ ಅರಣ್ಯ ಸೇರುವ ನಿರೀಕ್ಷೆ ಅರಣ್ಯ ಇಲಾಖೆಯಲ್ಲಿದೆ.(ಮೊದಲ ಪುಟದಿಂದ) ಹಾತೂರು ಗ್ರಾಮದಲ್ಲಿ ಪತ್ತೆಯಾಗಿರುವ ಹುಲಿಯ ಹೆಜ್ಜೆ ಗುರುತು ಸುಮಾರು 6 ಇಂಚುಗಳಷ್ಟು ಅಗಲವಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆಹಾರ ತ್ಯಜಿಸಿರುವ ಹಸುವ್ಯಾಘ್ರನಿಂದ ಗಾಯಗೊಂಡಿರುವ ಹಸು ಆಹಾರ ತ್ಯಜಿಸಿರುವದು ಆತಂಕ ಮೂಡಿಸಿದೆ. ಕಿವಿಯ ಭಾಗದಲ್ಲಿ ಹುಲಿಯ ಉಗುರಿನಿಂದ ಗಾಯವಾಗಿದ್ದು, ಬಾಯಿ ತೆರೆದು ಮೇವು ತಿನ್ನಲು ತೊಂದರೆಯಾಗಿದೆ. ಗಂಜಿ ನೀಡುವ ಮೂಲಕ ಮಾಲೀಕ ಉತ್ತಯ್ಯ ಪೋಷಿಸುತ್ತಿದ್ದಾರೆ. ಸ್ಥಳೀಯ ಪಶು ವೈದ್ಯ ರವಿ, ರೋಗನಿರೋಧಕ ಹಾಗೂ ಮಾತ್ರೆ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ. ಮನೆಯ ಸಮೀಪ ಹಸುವನ್ನು ಕಟ್ಟಿಕೊಂಡು ನೋಡಿಕೊಳ್ಳಲಾಗುತ್ತಿದೆ.
ಕೋತೂರುವಿನಲ್ಲಿ ಹಸುವಿನ ಮೃತದೇಹ ಪತ್ತೆ
ಕೋತೂರು ಗ್ರಾಮದಲ್ಲಿ ಹಸುವನ್ನು ಹುಲಿ ಕೊಂದುಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲಿನ ಕೊಟ್ಟಂಗಡ ದೇವಯ್ಯ ಎಂಬವರಿಗೆ ಸೇರಿದ ಹಸು ಕಾಣೆಯಾಗಿತ್ತು. ಈಗ ಹಸುವಿನ ಮೃತದೇಹ ಪತ್ತೆಯಾಗಿದ್ದು, ಸ್ವಲ್ಪ ಭಾಗವನ್ನು ತಿಂದಿದೆ. ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಘಟನೆ ನಡೆದು ಹತ್ತು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
- ಸುದ್ದಿಪುತ್ರ