ಶನಿವಾರಸಂತೆ ನ. 1: ಶನಿವಾರಸಂತೆ ಸಮೀಪದ ತ್ಯಾಗರಾಜ ಕಾಲೋನಿ ನಿವಾಸಿ ಮೀನಾಕ್ಷಿ ಉಮೇಶ ಅವರ ಪುತ್ರಿ ಜನನಿ (9) ಬುಧವಾರ ಸಂಜೆ ಪ್ರಜ್ಞೆತಪ್ಪಿ ಬಿದ್ದು ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ಅರಕಲಗೊಡು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದು, ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಎರಡು ಬಣಗಳ ವತಿಯಿಂದ ಗುರುವಾರ ಬೆಳಿಗ್ಗೆ ಶನಿವಾರಸಂತೆ ಸರಕಾರಿ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಜನನಿ 4ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಬುಧವಾರ ಸಂಜೆ ತರಗತಿ ಮುಗಿಸಿ ಆಟವಾಡಿಕೊಂಡು ಮನೆಗೆ ಬಂದು ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಶನಿವಾರಸಂತೆ ಆಸ್ಪತ್ರೆಗೆ ಕರೆ ತಂದಾಗ ವೈದ್ಯರಿಲ್ಲದಾಗ ದಾದಿಯರು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ಅಸಡ್ಡೆಯ ಉತ್ತರ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ದೊರೆಯದೆ ವಾಹನವೊಂದರಲ್ಲಿ ಅರಕಲಗೊಡು ಆಸ್ಪತ್ರೆಗೆ ಕರೆದೊಯ್ಯುವಾಗ ಬಾಲಕಿ ಮೃತಪಟ್ಟಿದ್ದಾಳೆ.

ಶನಿವಾರಸಂತೆ ಸರಕಾರಿ ಆಸ್ಪತ್ರೆಯ ಸ್ಥಿತಿಯ ಬಗ್ಗೆ ರೊಚ್ಚಿಗೆದ್ದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಬಣ)ಯ ಅಧ್ಯಕ್ಷ ಮಣಿ ಹಾಗೂ ಸಂಗಡಿಗರು ಗುರುವಾರ ಬೆಳಿಗ್ಗೆ ಸರಕಾರಿ ಆಸ್ಪತ್ರೆಯ ಬಾಗಿಲನ್ನು ಮುಚ್ಚಿ ಆಸ್ಪತ್ರೆಗೆ ಬಂದಂತಹ ರೋಗಿಗಳನ್ನು, ಮಕ್ಕಳನ್ನು ಎತ್ತಿಕೊಂಡು ಇಂಜಕ್ಷನ್ ಕೊಡಿಸಲು ಬಂದ ಮಹಿಳೆಯನ್ನು ಉದ್ದೇಶಿಸಿ, ಇಂದು ಆಸ್ಪತ್ರೆಗೆ ರಜೆ ಅರಕಲಗೊಡು ಆಸ್ಪತ್ರೆಗೆ ಹೋಗಿ, ಈ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ದಾದಿಯರು ಸ್ಪಂದಿಸುವದಿಲ್ಲ. ನಿನ್ನೆ ಸಂಜೆ ಒಂದು ಮಗು ಸತ್ತು ಹೋಗಿದೆ. ನಿಮ್ಮ ಮಗುವಿನ ಹಾಗೇ ಆ ಮಗು ಎಂದು ಒತ್ತಾಯಪೂರ್ವಕವಾಗಿ ವಾಪಾಸು ಕಳುಹಿಸುತ್ತಿದ್ದರು. ವಿಚಾರ ತಿಳಿದ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅರ್ಥ ಮಾಡಿಕೊಂಡ ತಾವುಗಳು ಆಸ್ಪತ್ರೆಯ ಬಾಗಿಲುಗಳನ್ನು ತೆರೆದು ವಾಪಾಸು ತೆರಳುತ್ತಿದ್ದ ರೋಗಿಗಳನ್ನು, ಮಕ್ಕಳನ್ನು ಎತ್ತಿಕೊಂಡ ಮಹಿಳೆಯರನ್ನು ವಾಪಾಸು ಕರೆದು ಚಿಕಿತ್ಸೆ ಮಾಡಿಸಿ ಕೊಳ್ಳುವಂತೆ ತಿಳಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಣಿಯನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.

ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಹಾಗೂ ಕಾರ್ಯ ಕರ್ತರು ಮತ್ತು (ನಾರಾಯಣ ಗೌಡ) ಬಣದ ಕಾರ್ಯಕರ್ತರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದರು. ವಿಚಾರ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಪಂದಿಸಿ ಕೊಡ್ಲಿಪೇಟೆ ಸರಕಾರಿ ವೈದ್ಯರನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.