ಕೂಡಿಗೆ, ನ. 1: ಹಾರಂಗಿ ಜಲಾಶಯದಿಂದ ರೈತರ ಬೇಸಾಯಕ್ಕಾಗಿ ಕಳೆದ ಮೂರು ತಿಂಗಳುಗಳಿಂದ ನೀರನ್ನು ಹರಿಸಲಾಗುತ್ತಿದೆ. ಆದರೆ ಹಾರಂಗಿ ಮುಖ್ಯ ನಾಲೆಯ ಸಮೀಪವಿರುವ 9ನೇ ತೂಬಿನ ರೈತರಿಗೆ ಕೊನೆಯ ಭಾಗದ ನೀರು ತಲಪದೇ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಬೇಸಾಯ ಮಾಡಿದ ಭತ್ತದ ಬೆಳೆ ಒಣಗುತ್ತಿದ್ದು, 9ನೇ ತೂಬಿನಿಂದ ಉಪನಾಲೆಗಳ ಮೂಲಕ ಕೊನೆಯ ಭಾಗಕ್ಕೆ ರೈತರಿಗೆ ನೀರು ಸರಬರಾಜಾಗುತ್ತಿಲ್ಲ. ಅಲ್ಲದೇ ಉಪನಾಲೆಗಳಲ್ಲಿ ಹೂಳು ತುಂಬಿರುವದರಿಂದ ನೀರಿನ ಹರಿಯುವಿಕೆಯನ್ನು ತೂಬಿನಿಂದ ಹೆಚ್ಚಿಸಿದರೇ ಸಮೀಪದಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ನೀರು ಹರಿಯುತ್ತಿದೆ. ಇದರಿಂದಾಗಿ ನಾಲೆಯಿಂದ ನೀರು ಹೆಚ್ಚಿಸುವದೂ ಇಲ್ಲ, ಕೊನೆಯ ಭಾಗದ ರೈತನಿಗೆ ನೀರು ತಲಪುವದೂ ಇಲ್ಲ. ಈ ರೀತಿಯ ಸಮಸ್ಯೆಯಿಂದಾಗಿ ಈ ತೂಬಿನ ರೈತರುಗಳು ಬೆಳೆದ ಬೆಳೆಗಳು ಒಣಗುತ್ತಿವೆ ಎಂದು ಈ ವ್ಯಾಪ್ತಿಯ ರೈತರುಗಳಾದ ಮಧುಕುಮಾರ್, ಪರಮೇಶ್, ಪುಟ್ಟಣ್ಣಯ್ಯ, ರವಿ ಆರೋಪಿಸಿದ್ದಾರೆ.

ಸಂಬಂಧಪಟ್ಟ ಕಾವೇರಿ ನೀರಾವರಿ ನಿಗಮದ ಅಥವಾ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಅಧಿಕಾರಿಗಳು ರೈತರ ಜಮೀನಿಗೆ ನೀರನ್ನು ಒದಗಿಸಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.