ಸಿದ್ದಾಪುರ, ನ. 1: ಗುಹ್ಯ-ಕಕ್ಕಟ್ಟುಕಾಡು ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಸಿದ್ದಾಪುರ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾ.ಪಂ. ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್, ಗುಹ್ಯ-ಕಕ್ಕಟ್ಟುಕಾಡು ರಸ್ತೆಯ ಸಮಸ್ಯೆಯ ಬಗ್ಗೆ ವಿಷಯ ಪ್ರಸ್ತಾಪಿಸಿ, ಸಭೆಯ ಗಮನ ಸೆಳೆದರು. ಕಕ್ಕಟ್ಟುಕಾಡು ಭಾಗದಲ್ಲಿ 35 ಕುಟುಂಬಗಳು ವಾಸವಾಗಿದ್ದರೂ ಮೂಲಭೂತ ಸೌಕರ್ಯವಾದ ರಸ್ತೆ ಇಲ್ಲದೆ ಪರಿತಪಿಸುತ್ತಿದ್ದಾರೆ. ವಾಹನ ಸಂಚಾರದ ಯೋಗ್ಯವಾದ ರಸ್ತೆ ಇಲ್ಲದ ಕಾರಣ ಹಲವು ಜೀವಗಳು ಬಲಿಯಾಗಿದೆ. ಹಾಗಾಗಿ ಗ್ರಾ.ಪಂ. ಮುತುವರ್ಜಿ ವಹಿಸಿ ರಸ್ತೆ ಮಾಡಿ ಕೊಡಬೇಕೆಂದು ಒತ್ತಾಯಿಸಿದರು. ಇದಕ್ಕೆ ದ್ವನಿಗೂಡಿಸಿದ ಸದಸ್ಯರಾದ ಪ್ರತಿಮಾ ಚಂದ್ರಶೇಖರ್, ಶಿವಕುಮಾರ್ ಹಾಗೂ ಶೈಲ ಗ್ರಾ.ಪಂ. ವತಿಯಿಂದ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ನಿರ್ಮಿಸಿಕೊಡಬೇಕೆಂದರು. ಇಲ್ಲವಾದಲ್ಲಿ ಗುಹ್ಯ ವಾರ್ಡ್‍ನ ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ಗ್ರಾ.ಪಂ. ಅಧ್ಯಕ್ಷ ಮಣಿ, ಕಕ್ಕಟ್ಟುಕಾಡು ಬಾಗದಲ್ಲಿ ರಸ್ತೆ ಇಲ್ಲದೇ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದು ರಸ್ತೆ ಮಾಡಲಾಗುವದು ಎಂದು ತಿಳಿಸಿದರು. ಇದೇ ಸಂದರ್ಭ ಆಡಳಿತ ಮಂಡಳಿಯು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿ ಠರಾವು ಮಾಡಲಾಯಿತು.

ಸಭೆಯಲ್ಲಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರು, ನೈರ್ಮಲ್ಯ, 14 ಹಣಕಾಸಿನ ಕ್ರಿಯಾ ಯೋಜನೆ, ಎಂ.ಜಿ.ಎನ್.ಆರ್.ಈ.ಜಿ. ಕ್ರಿಯಾ ಯೋಜನೆ, ಕಸದ ವಿಲೇವಾರಿ ವಿಷಯದಲ್ಲಿ ಚರ್ಚೆ ನಡೆಯಿತು.

ಇದಕ್ಕೂ ಮೊದಲು ಸಿದ್ದಾಪುರ ಗ್ರಾ.ಪಂ.ನಲ್ಲಿ ನೂತನವಾಗಿ ಆರಂಭವಾಗಿರುವ ಬಾಪೂಜಿ ಸೇವಾ ಕೇಂದ್ರದ ಉದ್ಘಾಟನೆ ನಡೆಯಿತು. ಈ ಸಂದರ್ಭ ಪಿ.ಡಿ.ಓ. ವಿಶ್ವನಾಥ್, ಕಾರ್ಯದರ್ಶಿ ವಿನೋದ್ ಸೇರಿದಂತೆ ಸದಸ್ಯರು ಹಾಜರಿದ್ದರು.