ಮಡಿಕೇರಿ, ನ. 1: ಕೊಡಗಿನ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಕರ್ನಾಟಕ ರಾಜ್ಯ ಮೈತ್ರಿ ಸರಕಾರಕ್ಕೆ ಲಭಿಸಿರುವ ಜನಬೆಂಬಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಪ್ರತಿಕ್ರಿಯಿಸಿದ್ದಾರೆ.

ಪ್ರಸಕ್ತ ಸೋಮವಾರಪೇಟೆ, ಕುಶಾಲನಗರ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ - ಜೆ.ಡಿ.ಎಸ್. ಸದಸ್ಯರ ಗೆಲವಿನೊಂದಿಗೆ ಎರಡು ದಶಕಗಳಿಂದ ಅಧಿಕಾರ ನಡೆಸುತ್ತಿದ್ದ ಬಿ.ಜೆ.ಪಿ.ಗೆ ಹಿನ್ನಡೆಯಾಗಿರುವದು, ಮುಖ್ಯಮಂತ್ರಿ ಕುಮಾರಸ್ವಾಮಿ ನಾಯಕತ್ವದ ಮೈತ್ರಿ ಸರಕಾರಕ್ಕೆ ದೊರೆತ ಬೆಂಬಲವೆಂದು ಅವರು ವಿಶ್ಲೇಷಿಸಿದರು.

ಕನ್ನಡ ರಾಜ್ಯೋತ್ಸವ ಸಮಾರಂಭದ ಬಳಿಕ ಮಾಧ್ಯಮದೊಂದಿಗೆ ಅಭಿಪ್ರಾಯ ನೀಡಿದ ಸಚಿವರು, ಕರ್ನಾಟಕದಲ್ಲಿ ಜೆ.ಡಿ.ಎಸ್. - ಕಾಂಗ್ರೆಸ್ ಮೈತ್ರಿ ಅನೈತಿಕವೆಂದು ಬಣ್ಣಿಸುವ ಬಿ.ಜೆ.ಪಿ.ಯವರು ರಾಷ್ಟ್ರದಲ್ಲಿ 24 ಪ್ರಾದೇಶಿಕ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಏನು ಹೇಳಿಯಾರು ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಮತ್ತೆ ಆಪರೇಷನ್ ಕಮಲ ಹೆಸರಿನಲ್ಲಿ ಮೈತ್ರಿ ಸರಕಾರ ಉರುಳಿಸಿ, ಅಧಿಕಾರ ಹಿಡಿಯಲು ಕನಸು ಕಾಣುತ್ತಿರುವ ಬಿ.ಜೆ.ಪಿ. ನಾಯಕರಿಗೆ ರಾಮನಗರ ಬೆಳವಣಿಗೆ ಸೂಕ್ತ ಉತ್ತರವಾದೀತು ಎಂದು ಸಚಿವ ಸಾ.ರಾ. ಮಹೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.