ಕುಶಾಲನಗರ, ನ. 3: ಜನರ ನಿರೀಕ್ಷೆಗೆ ತಕ್ಕಂತೆ ಪಟ್ಟಣ ಪಂಚಾಯಿತಿ ಸದಸ್ಯರು ಕಾರ್ಯೋನ್ಮುಖರಾಗಬೇಕು ಎಂದು ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಪ್ರಮೋದ್ ಮುತ್ತಪ್ಪ ಕರೆ ನೀಡಿದ್ದಾರೆ.

ಅವರು ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕುಶಾಲನಗರ ಪಟ್ಟಣ ಪಂಚಾಯಿತಿಯ ನೂತನ ಆಡಳಿತ ಮಂಡಳಿ ಸದಸ್ಯರೊಂದಿಗೆ ಸಂವಾದ ಮತ್ತು ಅಭಿನಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಚ ಕುಶಾಲನಗರ, ಸ್ವಚ್ಛ ಕಾವೇರಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವದರೊಂದಿಗೆ ಕುಶಾಲನಗರ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸಲು ಕ್ರಮಕೈಗೊಳ್ಳುವ ದಾಗಿ ಅವರು ಭರವಸೆ ನೀಡಿದರು.

ಚುನಾವಣೆ ಸಂದರ್ಭ ವಾರ್ಡ್‍ನಲ್ಲಿ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಕಾರ್ಯಸೂಚಿಗಳನ್ನು ಹಮ್ಮಿಕೊಳ್ಳುವದಾಗಿ ಸೂಚಿಸಿದ ಪ್ರಮೋದ್ ಮುತ್ತಪ್ಪ, ಚುನಾವಣೆ ಸಂದರ್ಭ ಪರಾಭವಗೊಂಡ ಅಭ್ಯರ್ಥಿಗಳ ಪ್ರಣಾಳಿಕೆಗಳ ಈಡೇರಿಕೆಗೂ ಆದ್ಯತೆ ನೀಡಬೇಕಿದೆ ಎಂದರು. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆತಾಗ ಅವರನ್ನು ಎಚ್ಚರಿಸುವ ಕೆಲಸ ಪತ್ರಿಕೆ, ಮಾಧ್ಯಮಗಳಿಂದ ಆಗುತ್ತಿವೆ. ಇದನ್ನು ನಕಾರಾತ್ಮಕವಾಗಿ ಪರಿಗಣಿಸದೆ ತಮ್ಮ ಅಭಿವೃದ್ಧಿ ಕಾರ್ಯಗಳಿಗೆ ಸ್ಫೂರ್ತಿಯಾಗಿ ಕಾಣಬೇಕಿದೆ ಎಂದರು.

ಸಂವಾದದಲ್ಲಿ ಅಪೂರ್ಣ ಗೊಂಡಿರುವ ಒಳಚರಂಡಿ, ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ ನಿರ್ಮಾಣ, ಖಾಸಗಿ ಬಸ್ ನಿಲ್ದಾಣ, ರಸ್ತೆಗಳ ಅಭಿವೃದ್ಧಿ, 24x7 ಕುಡಿಯುವ ನೀರಿನ ಪೂರೈಕೆ, ಕಾವೇರಿ ನದಿ ಸಂರಕ್ಷಣೆ, ಕಲಾಭವನ ಲೋಕಾರ್ಪಣೆ, ಪಂಚಾಯಿತಿ ಕಚೇರಿಯಲ್ಲಿ ಪಾರದರ್ಶಕ ಆಡಳಿತ, ಇ ಸ್ವತ್ತು ದಾಖಲೆ ಪತ್ರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆದವು.

ನೂತನ ಸದಸ್ಯರುಗಳು ತಮ್ಮ ವಾರ್ಡ್‍ಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವದರೊಂದಿಗೆ ಪ್ರಮುಖವಾಗಿ ಕಸ ವಿಲೇವಾರಿ, ಸ್ವಚ್ಚತೆ, ಸಂಚಾರಿ ನಿಯಂತ್ರಣ, ಮಾರುಕಟ್ಟೆಯಲ್ಲಿ ಶೌಚಾಲಯ ನಿರ್ಮಾಣ, ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ, ಸ್ಮಶಾನ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ತಮ್ಮ ವಾರ್ಡ್‍ಗಳಲ್ಲಿ ಮಾಹಿತಿ ಕಚೇರಿ ತೆರೆಯುವ ಬಗ್ಗೆ ಕೆಲವು ಸದಸ್ಯರು ತಮ್ಮ ಯೋಜನೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಬಲಂ ಭೋಜಣ್ಣ ರೆಡ್ಡಿ ಮಾತನಾಡಿದರು.

ಪತ್ರಕರ್ತರ ಸಂಘದ ಗೌರವಾಧ್ಯಕ್ಷÀ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು.

ಕಾರ್ಯಕ್ರಮದಕ್ಕೂ ಮೊದಲು ಕಚೇರಿ ಆವರಣದಲ್ಲಿ ಗಿಡ ನೆಡಲಾಯಿತು. ಸಂವಾದದಲ್ಲಿ ಪಾಲ್ಗೊಂಡಿದ್ದ ಸದಸ್ಯರುಗಳಿಗೆ ಗಿಡಗಳನ್ನು ನೀಡಿ ಅಭಿನಂದಿಸಲಾಯಿತು.

ನೂತನ ಆಡಳಿತ ಮಂಡಳಿ ಸದಸ್ಯರಾದ ಅಮೃತ್‍ರಾಜ್, ಎಂ.ಬಿ.ಸುರೇಶ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಜಯಲಕ್ಷ್ಮಿ ಚಂದ್ರು, ಬಿ.ಎಲ್.ಜಗದೀಶ್, ಎಂ.ಕೆ.ದಿನೇಶ್, ಶೇಖ್ ಖಲೀಮುಲ್ಲಾ, ಶೈಲಾ ಕೃಷ್ಣಪ್ಪ, ರೂಪ ಉಮಾಶಂಕರ್, ಕೇಶವ ಹಾಗೂ ಪತ್ರಕರ್ತರ ಸಂಘ ಕಾರ್ಯದರ್ಶಿ ರಘು ಹೆಬ್ಬಾಲೆ, ಖಜಾಂಚಿ ಸುನೀಲ್ ಪಿ.ಬಿ ಮತ್ತು ಪದಾಧಿಕಾರಿಗಳು, ಸದಸ್ಯರು ಇದ್ದರು.